ದಾವಣಗೆರೆ ಕಾರ್ಗಿಲ್ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ
ಅನ್ನಕ್ಕೆ ಆಸರೆಯಾದ ಬಹುರಾಷ್ಟ್ರೀಯ ಕಂಪನಿ ಉತ್ಪಾದನೆ ಸ್ಥಗಿತಗೊಳಿಸಿದ್ದು ದುಡಿಯುವ ಕೈಗಳ ಆಕ್ರೋಶಕ್ಕೆ ಕಾರಣವಾಗಿದೆ.
ದಾವಣಗೆರೆ: ಮೆಕ್ಕೆಜೋಳ ಉಪಯೋಗಿಸಿಕೊಂಡು ಉತ್ಪನ್ನಗಳನ್ನು ತಯಾರಿಸುತ್ತಾ ನೂರಾರು ಕೈಗಳಿಗೆ ಕೆಲಸ ಕೊಡುತ್ತಿದ್ದ ದಾವಣಗೆರೆಯ ಕಾರ್ಗಿಲ್ ಕಾರ್ಖಾನೆ ಇದ್ದಕ್ಕಿದ್ದಂತೆ ಕೆಲಸ ಸ್ಥಗಿತಗೊಳಿಸಿದೆ. ಅಲ್ಲದೆ ಕಂಪನಿಯ ಆಸ್ತಿ ಮಾರಾಟವಾಗಿದ್ದು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ನ್ಯಾಯ ಕೊಡುವಂತೆ ಕಾರ್ಖಾನೆ ಮುಂದೆ ಹೋರಾಟಕ್ಕಿಳಿದಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಬಳಿ ಇರುವ 'ಕಾರ್ಗಿಲ್' ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿ. ರೈತಾಪಿ ಜನರ ಮೆಕ್ಕೆಜೋಳ ಖರೀದಿಸುತ್ತಾ ರೈತರಿಗೆ ಆಸರೆಯಾಗಿದ್ದ ಕಾರ್ಗಿಲ್, ಇದೀಗ ರೈತರ ಮೆಕ್ಕೆಜೋಳ ಖರೀದಿಸದೇ ಇರುವುದು ಅನ್ನದಾತನಿಗೆ ನುಂಗಲಾರದ ತುತ್ತಾಗಿದೆ.
ಅಡುಗೆ ಮಾಡುತ್ತಾ ಧರಣಿ:ಕಂಪನಿಯ ಮುಖ್ಯದ್ವಾರದಲ್ಲಿ ಶಾಮಿಯಾನ ಹಾಕಿ ನೂರಾರು ಕಾರ್ಮಿಕರು ಧರಣಿ ಆರಂಭಿಸಿದ್ದಾರೆ. ಕಾರ್ಮಿಕರ ಹಿತ ಬಲಿ ಕೊಟ್ಟು ಕಾನೂನುಬಾಹಿರವಾಗಿ ಆಸ್ತಿ ಮಾರಾಟ ಮಾಡಿದ್ದು ನಮಗೆ ಕೆಲಸ ಇಲ್ಲದಂತಾಗಿದೆ. ಇದನ್ನು ಹತ್ತು ವರ್ಷಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರೇ ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಗಳಾದ ವೇಳೆ ಉದ್ಘಾಟಿಸಿದ್ದರು. ಇದೀಗ ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾಗ ಕಾರ್ಖಾನೆ ಲಾಕ್ಔಟ್ ಆಗುವ ಸಂಭವವಿದೆ ಎಂದು ಹೇಳಿದರು.
ಇಲ್ಲಿ ಮೆಕ್ಕೆಜೋಳದಿಂದ ಆಹಾರ ಸಾಮಗ್ರಿ ತಯಾರಿಸಿ ದೇಶ-ವಿದೇಶಗಳಿಗೆ ಸಾಗಾಟ ಮಾಡಲಾಗುತ್ತಿತ್ತು. ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕಾರ್ಗಿಲ್ ಕಂಪನಿಗೆ 120 ಕಾಯಂ ಹಾಗೂ 270 ಗುತ್ತಿಗೆ ಕಾರ್ಮಿಕರಿದ್ದಾರೆ. ಎಂಟು ತಿಂಗಳಿಂದ ಕಂಪನಿಯಲ್ಲಿ ಉತ್ಪಾದನೆ ಸ್ಥಗಿತವಾಗಿದೆ. ಈಗಾಗಲೇ ಕಾರ್ಮಿಕರನ್ನು ಕೆಲಸದಿಂದ ಕೈಬಿಡಲಾಗಿದೆ ಎಂದು ದೂರಿದರು.
ತಕ್ಷಣವೇ ಕಂಪನಿ ಆರಂಭವಾಗಬೇಕು. ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಬೇಕು. ನೂತನ ಮಾಲೀಕರಾದರೂ ಕಾರ್ಮಿಕರ ಜತೆ ಮಾತಾಡಬೇಕು ಎಂದು ಆಗ್ರಹಿಸಿದರು. ಧರಣಿ ಸತ್ಯಾಗ್ರಹ ಇಂದಿಗೆ ಏಳನೇ ದಿನಕ್ಕೆ ಕಾಲಿಟ್ಟಿದೆ.
ರೈತರ ಮೆಕ್ಕೆಜೋಳ ಖರೀದಿ ಇಲ್ಲ:ಇಲ್ಲಿ ಬರೀ ಕಾರ್ಮಿಕರ ಸಮಸ್ಯೆಯಲ್ಲ. ಕ್ವಿಂಟಾಲ್ಗಟ್ಟಲೆ ಮೆಕ್ಕೆಜೋಳ ಖರೀದಿ ಮಾಡ್ತಿದ್ದ ಕಾರ್ಖಾನೆ ಮುಸುಕಿನ ಜೋಳ ಖರೀದಿ ನಿಲ್ಲಿಸಿದೆ. ಇದೀಗ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕುಸಿದಿದೆ. ಕೋಟ್ಯಂತರ ರೂಪಾಯಿ ರೈತರಿಗೆ ನಷ್ಟವಾಗಿದೆ. ವರ್ಷಕ್ಕೆ ಹತ್ತು ಲಕ್ಷ ಟನ್ ಮೆಕ್ಕೆಜೋಳ ಇಲ್ಲಿ ಖರೀದಿ ಆಗುತ್ತಿತ್ತು. ಇಂತಹ ಕಾರ್ಖಾನೆ ತಾತ್ಕಾಲಿಕವಾಗಿ ಉತ್ಪಾದನೆ ನಿಲ್ಲಿಸಿರುವುದು, ಆಸ್ತಿ ಮಾರಾಟ ಮಾಡಿರುವುದು ಅನ್ನದಾತನಿಗೆ ನಷ್ಟ ಅನುಭವಿಸುವಂತೆ ಆಗಿದೆ. ಅಲ್ಲದೆ ಕಾರ್ಮಿಕರಿಗೆ ನ್ಯಾಯಯುತವಾಗಿ ಕೆಲಸ ಹಾಗೂ ಪರಿಹಾರ ನೀಡದೆ ಲಾಕ್ಔಟ್ ಮಾಡಿದ್ದಾರೆ. ಈಗಾಗಲೇ ಕಾರ್ಮಿಕ ಸಚಿವರಿಗೆ ಮಾಹಿತಿ ನೀಡಿದ್ದು, ಅವರ ಬಳಿ ಕಾರ್ಮಿಕರ ನಿಯೋಗ ಹೋಗಲಿದೆ ಎಂದು ಕಾರ್ಮಿಕರು ತಿಳಿಸಿದರು.
ಕಾರ್ಮಿಕರ ಹೇಳುವುದೇನು?:ಕಾರ್ಗಿಲ್ ವರ್ಕಿಂಗ್ ಯೂನಿಯನ್ ಅಧ್ಯಕ್ಷ ಸಂಜಯ್ ಮಾತನಾಡಿ, "ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದೇವೆ. ಈ ಕಂಪನಿ ತನ್ನ ಅಸೆಟ್ ಮಾರಾಟ ಮಾಡಿದೆ. ಕೆಲಸದ ಭದ್ರತೆ ನೀಡಿಲ್ಲ. ಅದಕ್ಕಾಗಿ ಡೆಪ್ಯೂಟಿ ಲೇಬರ್ ಕಮಿಷನರ್ ಅವರ ಬಳಿ ಕೇಸ್ ಹಾಕಿದ್ದೇವೆ. ಇವರು ಏನೂ ಬದಲಾವಣೆ ಮಾಡಬಾರದಿತ್ತು. 120 ಜನ ಪರ್ಮನೆಂಟ್ ಉದ್ಯೋಗಿಗಳಲ್ಲಿ 60 ಜನರನ್ನು ತೆಗೆದುಹಾಕಲಾಗಿದೆ. 270 ಜನರ ಗುತ್ತಿಗೆ ಉದ್ಯೋಗಿಗಳಿಗೂ ಗೇಟ್ಪಾಸ್ ಕೊಟ್ಟಿದ್ದಾರೆ. ನಾವು ಹೋರಾಟಕ್ಕಿಳಿಯುವಂತೆ ಮಾಡಿದ್ದಾರೆ. ಆಡಳಿತ ಮಂಡಳಿ ನಮ್ಮ ಹತ್ತಿರ ಬಂದಿಲ್ಲ, ಮಾತಾನಾಡಿಲ್ಲ. ನಮ್ಮ ಬಳಿ ಬರಬೇಕು ಬೇಡಿಕೆ ಈಡೇರಿಸಬೇಕು" ಎಂದು ಹೇಳಿದರು.
ಗುತ್ತಿಗೆ ಕಾರ್ಮಿಕ ಮಂಜುನಾಥ್ ಮಾತನಾಡಿ, "ಈ ಕಂಪನಿಯಲ್ಲಿ ನಾವು 10 ವರ್ಷಗಳ ಕಾಲ ಕೆಲಸ ಮಾಡಿದ್ದೇವೆ. ಅಲ್ಲದೆ ಕೊರೊನಾ ವೇಳೆಯೂ ಕೆಲಸ ಮಾಡಿದ್ದೇವೆ. ಈ ಕಂಪನಿ ತನ್ನ ಉತ್ಪಾದನೆ ನಿಲ್ಲಿಸುತ್ತದೆ ಎಂದು ಗೊತ್ತಿರಲಿಲ್ಲ. ಹೀಗೆ ಒಂದು ದಿನ ಏನೂ ಹೇಳದೆ ಕೇಳದೆ ಕೆಲಸದಿಂದ ತೆಗೆದು ಹಾಕಿದ್ದಾರೆ. ನಾವು ಇದೀಗ ನ್ಯಾಯಕ್ಕಾಗಿ ಧರಣಿ ಮಾಡ್ತಿದ್ದೇವೆ. ನಮಗೆ ಪರಿಹಾರ ಬೇಕು. ಹಾಗೇ ಕಂಪನಿ ಆರಂಭಿಸಿದ್ರೇ ಖಾಯಂ ಕೆಲಸ ಬೇಕು. ಕೆಲಸ ಇಲ್ಲದೆ ಮನೆಯಲ್ಲಿ ಕಷ್ಟ ಆಗ್ತಿದೆ. ಸಾಲ ಮಾಡಿ ಜೀವನ ನಡೆಸುತ್ತಿದ್ದೇವೆ. ಇಲ್ಲಿ ಮೆಕ್ಕೆಜೋಳದಲ್ಲಿ ಕಾರ್ನ್, ಗ್ಲೂಕೋಸ್, ಲೂಟನ್, ಲಿಕ್ವಿಡ್ ಗ್ಲೂಕೋಸ್, ಮಲ್ಟೊಡೆಕ್ಷನ್ ಪೌಡರ್, ಅಲ್ಲದೆ ಪಶುಗಳಿಗೆ, ಮೀನುಗಳಿಗೆ ಫುಡ್ ತಯಾರು ಮಾಡಲಾಗುತ್ತದೆ" ಎಂದರು.
Comments
Post a Comment