ಅಪ್ಪ ಪಬ್ಲಿಕ್ ಪ್ರಾಸಿಕ್ಯೂಟರ್, ಮಗ ಸಿವಿಲ್ ಜಡ್ಜ್: ಅತಿ ಕಿರಿಯ ವಯಸ್ಸಲ್ಲಿ ನ್ಯಾಯಾಧೀಶರಾದ ಶಿರಸಿಯ ಸುಮಂತ್


 ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾದ ಸುಮಂತ್ ಮಂಜುನಾಥ್ ನಾಯ್ಕ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆಯುವ ಮೂಲಕ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಶಿರಸಿ (ಉತ್ತರ ಕನ್ನಡ) : ಕಳೆದ ಸಾಲಿನಲ್ಲಿ ನಡೆದ‌ ನ್ಯಾಯಾಂಗ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾದ ಸುಮಂತ್ ಮಂಜುನಾಥ್ ನಾಯ್ಕ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆಯುವ ಮೂಲಕ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು, 25ನೇ ವಯಸ್ಸಿಗೆ ಜಡ್ಜ್ ಆಗಿ ಆಯ್ಕೆಯಾದ ಜಿಲ್ಲೆಯ ಮೊದಲಿಗರಾಗಿದ್ದಾರೆ.


ಶಿರಸಿ ತಾಲೂಕಿನ ಹೆಗಡೆಕಟ್ಟಾದ ಪ್ರಸ್ತುತ ಬೆಂಗಳೂರಿನ ಲೋಕಾಯುಕ್ತ ಕೋರ್ಟಿನ ಸರ್ಕಾರಿ ಅಭಿಯೋಜಕರಾಗಿರುವ ಶಿರಸಿಯ ಮಂಜುನಾಥ ನಾಯ್ಕ ಹಾಗೂ ಸುಜಾತಾ ನಾಯ್ಕ ದಂಪತಿಯ ಸುಪುತ್ರನಾದ ಸುಮಂತ್ ಅತಿ ಕಿರಿಯ ವಯಸ್ಸಿನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

2025ರ ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆಯುವ ಮೂಲಕ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.


ನ್ಯಾ. ಸುಮಂತ ಪರಿಚಯ: ಪ್ರಾಥಮಿಕ ಶಿಕ್ಷಣವನ್ನು ಶಿರಸಿಯ ಸೇಂಟ್ ಅಂತೋನಿ, ಪ್ರೌಢ ಶಿಕ್ಷಣವನ್ನು ಅವೇಮರಿಯಾದಲ್ಲಿ ಪಡೆದ ಸುಮಂತ್ ನಾಯ್ಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದಿದ್ದರು. ಶಿರಸಿಯ ಎಂಇಎಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಸುಮಂತ್ ಹುಬ್ಬಳ್ಳಿಯ ಕರ್ನಾಟಕ ಲಾ ಯುನಿವರ್ಸಿಟಿಯಲ್ಲಿ ಐದು ವರ್ಷ ಕಾಲ ಕಾನೂನು‌ ಪದವಿ ವ್ಯಾಸಂಗ ಮಾಡಿದ್ದರು.‌

ಅಪ್ಪ ಸರ್ಕಾರಿ ಅಭಿಯೋಜಕ, ಮಗ ಜಡ್ಜ್ : ಶಿರಸಿಯ ಮಂಜುನಾಥ ನಾಯ್ಕ ಸರ್ಕಾರಿ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸುಪುತ್ರ ಸುಮಂತ್ ಮಂಜುನಾಥ ನಾಯ್ಕ ನ್ಯಾಯಾಂಗ ಇಲಾಖೆಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಅಪ್ಪ ಸರ್ಕಾರದ ಪರವಾಗಿ ವಾದಿಸುವ ವಕೀಲರಾದರೆ, ಮಗ ಪ್ರಕರಣದ ತೀರ್ಪು ಕೊಡುವ ಜಡ್ಜ್ ಆಗಿ ಆಯ್ಕೆಯಾಗಿದ್ದಾರೆ.


ಮಗನ ಯಶಸ್ಸಿನಿಂದ ತಾಯಿಗೆ ಸಂತಸ: ನನ್ನ ಮಗ ಸುಮಂತ್ ಕರ್ನಾಟಕ ಹೈಕೋರ್ಟ್ ಪ್ರಕಟಿಸಿದ ವರದಿಯ ಪ್ರಕಾರ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾನೆ. ಆತ ನ್ಯಾಯಾಧೀಶನಾಗಿರುವುದು ಸಂತಸ ತಂದಿದೆ ಎಂದು ಸುಮಂತ ಅವರ ತಾಯಿ ಸುಜಾತಾ ನಾಯ್ಕ ಈಟಿವಿ ಭಾರತನೊಂದಿಗೆ ಖುಷಿಯನ್ನು ಹಂಚಿಕೊಂಡರು

Comments

Popular posts from this blog

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ದಾವಣಗೆರೆ: ಪೊಲೀಸರ ಮೇಲೆ ಕಾಂಗ್ರೆಸ್ ಮುಖಂಡನ ಪುತ್ರರಿಂದ ಹಲ್ಲೆ; ಮೊಬೈಲ್ ಕಸಿದು ದಾಂಧಲೆ!

ಲೋಕಾಯುಕ್ತ ದಾಳಿ: ಬಿಡಿಎ ಅರಣ್ಯಾಧಿಕಾರಿ ಮನೆಯಲ್ಲಿ ₹3.08 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ!