ನಕಲಿ ಬಿಲ್ ಸೃಷ್ಟಿಸಿ 15 ಲಕ್ಷ ರೂ. ಲೂಟಿ ಮಾಡಲು ಯತ್ನ: ಡಿಸಿ ಕಚೇರಿಯ ಐವರು ಸಿಬ್ಬಂದಿ ಅರೆಸ್ಟ್
ನಕಲಿ ಬಿಲ್ ಸೃಷ್ಟಿಸಿ 15 ಲಕ್ಷ ರೂ. ಲೂಟಿ ಮಾಡಲು ಯತ್ನ: ಡಿಸಿ ಕಚೇರಿಯ ಐವರು ಸಿಬ್ಬಂದಿ ಅರೆಸ್ಟ್
ಚಿತ್ರದುರ್ಗ: ಜಿಲ್ಲಾಧಿಕಾರಿ ಮತ್ತು ಎಡಿಸಿ ಅವರ ಡಿಜಿಟಲ್ ಸಹಿಯನ್ನು ದುರುಪಯೋಗಪಡಿಸಿಕೊಂಡು ಸುಮಾರು 15 ಲಕ್ಷ ರೂ. ಮೌಲ್ಯದ ನಕಲಿ ಬಿಲ್ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ನಗರಾಭಿವೃದ್ಧಿ ವಿಭಾಗದಲ್ಲಿ ಹೊರಗುತ್ತಿಗೆ ನೌಕರ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮಹೆಬೂಬ್ ಭಾಷಾ ಹಾಗೂ ವೆಂಕಟೇಶ್ ಎಂಬ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಐವರನ್ನು ಬಂಧಿಸಲಾಗಿದ್ದು, ಎ1 ಆರೋಪಿ ಸೈಯದ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಜಿಲ್ಲಾ ನಗರಾಭಿವೃದ್ಧಿ ಕೋಶದ ಐವರು ಸಿಎಲ್‌ಟಿಸಿ ಸಿಬ್ಬಂದಿ ಜಿಲ್ಲಾಧಿಕಾರಿ ಮತ್ತು ಎಡಿಸಿಯವರ ಡಿಜಿಟಲ್ ಸಹಿ ಬಳಸಿ 15.08 ಲಕ್ಷ ರೂ. ಮೊತ್ತದ ನಕಲಿ ಬಿಲ್ ಸೃಷ್ಟಿಸಿದ್ದರು. ಈ ನಕಲಿ ಬಿಲ್ಲನ್ನು ಜಿಲ್ಲಾ ಖಜಾನೆಗೆ ಕಳುಹಿಸಿದಾಗ, ಸಹಿಯ ಬಗ್ಗೆ ಅನುಮಾನಗೊಂಡ ಖಜಾನೆ ಇಲಾಖೆ ಅಧಿಕಾರಿಗಳು ಆಕ್ಷೇಪಣೆ ಎತ್ತಿದರು. ಇದರಿಂದ ವಂಚನೆ ಬೆಳಕಿಗೆ ಬಂದಿದೆ.
ಸೈಯದ್ ಸಾದಿಕ್ ಎಂಬ ನೌಕರ ಡಿಸಿ ಕಚೇರಿಯಿಂದ ಡಿಜಿಟಲ್ ಸಹಿಯ ಕೀಲಿಯನ್ನು ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್ ಅವರು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಂಚನೆಯಲ್ಲಿ ಭಾಗಿಯಾದ ಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಒಬ್ಬ ಸರ್ಕಾರಿ ನೌಕರನನ್ನು ಅಮಾನತುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Comments
Post a Comment