ದಂಗೆಯ ಸಮಯದಲ್ಲಿ ಪ್ರಾಣ ನೀಡಿದವರಿಗೆ ಕೃತಜ್ಞತೆ: ಕಳೆದ 30 ವರ್ಷಗಳಿಂದ ರಂಜಾನ್ ವ್ರತ ಪಾಲಿಸುತ್ತಿದ್ದಾರೆ ಖ್ಯಾತ ಶೆಫ್ ವಿಕಾಸ್ ಖನ್ನಾ
ಮಿಚೆಲಿನ್ ಸ್ಟಾರ್ ಗೌರವಕ್ಕೆ ಪಾತ್ರರಾಗಿರುವ ವಿಶ್ವವಿಖ್ಯಾತ ಶೆಫ್ ವಿಕಾಸ್ ಖನ್ನಾ ಅವರು ಪ್ರತಿ ವರ್ಷ ರಂಜಾನ್ ಮಾಸದಲ್ಲಿ ಒಂದು ದಿನ ಉಪವಾಸ (ರೋಜಾ) ಮಾಡುತ್ತಾರೆ. ಒಬ್ಬ ಪಂಜಾಬಿ ಹಿಂದೂ ಕುಟುಂಬದಲ್ಲಿ ಹುಟ್ಟಿದ ಇವರು ಕಳೆದ 30 ವರ್ಷಗಳಿಂದ ಈ ಪದ್ಧತಿಯನ್ನು ಪಾಲಿಸುತ್ತಿರುವುದರ ಹಿಂದೆ ಧರ್ಮಕ್ಕಿಂತ ಮಿಗಿಲಾದ ಮಾನವೀಯತೆಯ ಕಥೆಯಿದೆ
1992ರಲ್ಲಿ ಮುಂಬೈನಲ್ಲಿ ಭೀಕರ ಕೋಮು ದಂಗೆ ನಡೆಯುತ್ತಿದ್ದ ಸಮಯ. ಆಗ ವಿಕಾಸ್ ಖನ್ನಾ ಮುಂಬೈನ ಹೋಟೆಲ್ ಒಂದರಲ್ಲಿ ಟ್ರೈನಿ ಆಗಿ ಕೆಲಸ ಮಾಡುತ್ತಿದ್ದರು. ಇಡೀ ನಗರ ಹೊತ್ತಿ ಉರಿಯುತ್ತಿತ್ತು. ಆ ಗಲಭೆಯ ನಡುವೆ ಘಾಟ್ಕೋಪರ್‌ನಲ್ಲಿದ್ದ ತನ್ನ ಸಹೋದರನ ಸುರಕ್ಷತೆಯ ಬಗ್ಗೆ ವಿಕಾಸ್ ಅವರಿಗೆ ಆತಂಕ ಶುರುವಾಯಿತು.
ಪ್ರಾಣ ಉಳಿಸಿದ ಆ ಮುಸ್ಲಿಂ ಕುಟುಂಬ
ತಮ್ಮ ಸಹೋದರನನ್ನು ಹುಡುಕುತ್ತಾ ವಿಕಾಸ್ ಸುಮಾರು ಎರಡುವರೆ ಗಂಟೆಗಳ ಕಾಲ ಕಾಲ್ನಡಿಗೆಯಲ್ಲೇ ಸಾಗಿದರು. ದಾರಿಯಲ್ಲಿ ಒಂದು ಮುಸ್ಲಿಂ ಕುಟುಂಬ ಇವರನ್ನು ಕಂಡು, ಹೊರಗೆ ಪರಿಸ್ಥಿತಿ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿ ತಮ್ಮ ಮನೆಗೆ ಕರೆದೊಯ್ದರು.
ಸ್ವಲ್ಪ ಸಮಯದಲ್ಲೇ ರೊಚ್ಚಿಗೆದ್ದ ಗುಂಪೊಂದು ಆ ಮನೆಗೆ ನುಗ್ಗಿ ವಿಕಾಸ್ ಯಾರು ಎಂದು ಪ್ರಶ್ನಿಸಿತು. ಆಗ ಆ ಕುಟುಂಬದವರು ಹಿಂಜರಿಯದೆ, “ಇವನು ನಮ್ಮ ಮಗ” ಎಂದು ಸುಳ್ಳು ಹೇಳಿ ದಂಗೆಕೋರರಿಂದ ವಿಕಾಸ್ ಪ್ರಾಣ ಉಳಿಸಿದರು. ಅಷ್ಟೇ ಅಲ್ಲದೆ, ತಮ್ಮ ಅಳಿಯನನ್ನು ಕಳುಹಿಸಿ ವಿಕಾಸ್ ಅವರ ಸಹೋದರ ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿಯನ್ನೂ ತರಿಸಿಕೊಟ್ಟರು.
ಕೃತಜ್ಞತೆಯ ಸಂಕೇತವಾಗಿ ರೋಜಾ
ಎರಡು ದಿನಗಳ ಕಾಲ ಆ ಮನೆಯಲ್ಲೇ ನೆಲದ ಮೇಲೆ ಮಲಗಿ ಆಶ್ರಯ ಪಡೆದ ವಿಕಾಸ್ ಅವರಿಗೆ ಆ ಕುಟುಂಬದವರ ಹೆಸರು ಕೂಡ ತಿಳಿದಿರಲಿಲ್ಲ. ಅಂದಿನಿಂದ, ತಮಗೆ ಮರುಜನ್ಮ ನೀಡಿದ ಆ ಕುಟುಂಬದ ನೆನಪಿಗಾಗಿ ಮತ್ತು ಅವರ ಕ್ಷೇಮಕ್ಕಾಗಿ ವಿಕಾಸ್ ಪ್ರತಿ ವರ್ಷ ರಂಜಾನ್‌ನ ಒಂದು ದಿನ ಕಡ್ಡಾಯವಾಗಿ ಉಪವಾಸ ಮಾಡುತ್ತಾರೆ.
2017ರಲ್ಲಿ ಸಿಕ್ಕಿದ ಆತ್ಮೀಯರು
ಹಲವು ವರ್ಷಗಳ ಕಾಲ ಆ ಕುಟುಂಬದ ವಿಳಾಸ ಸಿಗದೆ ವಿಕಾಸ್ ಹುಡುಕಾಟ ನಡೆಸಿದ್ದರು. ಅಂತಿಮವಾಗಿ 2017ರಲ್ಲಿ ಸೋಷಿಯಲ್ ಮೀಡಿಯಾ ಸಹಾಯದಿಂದ ಆ ಕುಟುಂಬವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಅಂದು ಅವರ ಜೊತೆಯಲ್ಲೇ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ತಮ್ಮ ರೋಜಾ ಅಂತ್ಯಗೊಳಿಸಿದ ವಿಕಾಸ್, “ಇದು ನನ್ನ ಬದುಕಿನ ಅತ್ಯಂತ ಮಹತ್ವದ ಈದ್” ಎಂದು ಭಾವುಕರಾಗಿ ಬರೆದುಕೊಂಡಿದ್ದರು.

Comments
Post a Comment