ದಾಣಗೆರೆಯಲ್ಲಿ ಉದ್ಯಮಿ ದಂಪತಿ, ಇಬ್ಬರು ಯುವತಿಯರಿಂದ ಜೈನ ಸನ್ಯಾಸ ದೀಕ್ಷೆ ಸ್ವೀಕಾರ


 ದಾವಣಗೆರೆಯಲ್ಲಿ ಕೋಟ್ಯಂತರ ರೂಪಾಯಿಯ ಹಣ-ಆಸ್ತಿ ದಾನ ಮಾಡಿ ದಂಪತಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ದಂಪತಿಯ ಇಬ್ಬರು ಪುತ್ರರು ಕೂಡ ಮೂರು ವರ್ಷಗಳ ಹಿಂದೆಯೇ ಸನ್ಯಾಸತ್ವ ಸ್ವೀಕರಿಸಿದ್ದರು. ಇನ್ನು ಇದೇ ವೇಳೆ ಇಬ್ಬರು ಯುವತಿಯರು ಕೂಡ ಲೌಕಿಕ ಜೀವನ ತೊರೆದು ಸನ್ಯಾಸ ಜೀವನ ಆಯ್ಕೆ ಮಾಡಿಕೊಂಡಿದ್ದಾರೆ.

ದಾವಣಗೆರೆ: ನಗರದಲ್ಲಿ ಉದ್ಯಮಿ ದಂಪತಿ ಹಾಗೂ ಇಬ್ಬರು ಯುವತಿಯರು ಲೌಕಿಕ ಸುಖ-ಸಂತೋಷಗಳನ್ನು ತ್ಯಜಿಸಿ, ಕಠಿಣ ಜೈನ ಸನ್ಯಾಸ ದೀಕ್ಷೆ (Jain Diksha) ಸ್ವೀಕರಿಸಿದ್ದಾರೆ. ಆಚಾರ್ಯ ಶ್ರೀ ಅಭಯ್ ಶೇಖರ್ ಸುರೀಶ್ವರ ಜೀ ಮಹಾರಾಜ್ ಅವರ ಸಾನ್ನಿಧ್ಯದಲ್ಲಿ ಪುಣೆಯ ಸಿಂಬೋಸಿಸ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದುಕೊಂಡಿರುವ ಕ್ರನಾಲ್ ಬೇನ್ (30), ದಾವಣಗೆರೆಯ ಬಿ.ಕಾಂ ಪದವೀಧರೆ, ದೀಕ್ಷಿತ ಬೇನ್ (28) ಸನ್ಯಾಸತ್ವದ ದೀಕ್ಷೆ ಪಡೆದುಕೊಂಡಿದ್ದಾರೆ. ಅಲ್ಲದೇ ದಾವಣಗೆರೆಯ ಲಲಿತ್ ಗಾರ್ಮೆಂಟ್ಸ್‌ನ ಮಾಲೀಕರಾದ ಭರತ್ ಜೈನ್ (52), ಪತ್ನಿ ಆರತಿ ಬೇನ್ (50) ಕೂಡ ಸನ್ಯಾಸತ್ವದ ದೀಕ್ಷೆ ಸ್ವೀಕರಿಸಿದ್ದಾರೆ.

ಭರತ್ ಜೈನ್, ಆರತಿ ಬೇನ್ ದಂಪತಿಯ ಇಬ್ಬರು ಪುತ್ರರು ಮೂರು ವರ್ಷಗಳ ಹಿಂದೆಯೇ ಸನ್ಯಾಸತ್ವ ಸ್ವೀಕರಿಸಿದ್ದರು. ಮುನಿ ಶ್ರೀ ಮಗ್ನಶೇಖರ್ ವಿಜಯ್ ಜಿ ಮತ್ತು ಮುನಿ ಶ್ರೀ ಪೂರ್ಣ ಶೇಖರ್ ವಿಜಯ್ ಜಿ ಸನ್ಯಾಸತ್ವ ಸ್ವೀಕರಿಸಿದ್ದರು. ಈಗ ದಂಪತಿ ಕೋಟ್ಯಂತರ ರೂಪಾಯಿಯ ಹಣ-ಆಸ್ತಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.


ಜೈನ ಧರ್ಮದಲ್ಲಿ ಸನ್ಯಾಸತ್ವ ಸ್ವೀಕರಿಸುವುದು ಎಂದರೆ ಸುಲಭದ ಮಾತಲ್ಲ. ಅದು ಕೆಂಡದ ಮೇಲೆ ನಡೆದಂತೆ. ಜೀವನ ಪೂರ್ತಿ ಬರಿಗಾಲಿನ ನಡಿಗೆ, ಅತಿಸೂಕ್ಷ್ಮ ಜೀವಿಗಳಿಗೂ ನೋವಾಗದಂತೆ ಬದುಕುವುದು, ಕೈಯಿಂದಲೇ ಕೂದಲನ್ನು ಕಿತ್ತುಕೊಳ್ಳುವ ಕಠಿಣ ವಿಧಿ ವಿಧಾನ, ಮೊಬೈಲ್, ವಿದ್ಯುತ್, ವಾಹನ ಸೇರಿದಂತೆ ಯಾವುದೇ ಭೌತಿಕ ವಸ್ತುಗಳನ್ನು ಬಳಸುವಂತಿಲ್ಲ. ಇಂತಹ ಕಠಿಣ ದೀಕ್ಷೆ ಪಡೆಯುವ ಮೂಲಕ ದಾವಣಗೆರೆಯ ಈ ನಾಲ್ವರು ಮುಮುಕ್ಷುಗಳು ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ್ದಾರೆ.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!