ದಾವಣಗೆರೆ ದಕ್ಷಿಣ ಉಪ ಚುನಾವಣೆ: ಅವನ್ಯಾರು ಮಾತನಾಡೋಕೆ? ಇವೆಲ್ಲ ಸರಿ ಇರಲ್ಲ: ಜಮೀರ್ ವಿರುದ್ಧ SS ಮಲ್ಲಿಕಾರ್ಜುನ್ ಕಿಡಿ
ದಾವಣಗೆರೆ ಉಪ ಚುನಾವಣೆ ಕಾಂಗ್ರೆಸ್ ಟಿಕೆಟ್ ವಿಚಾರ ದಿನದಿಂದ ದಿನಕ್ಕೆ ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯ ವಹಿಸಿಕೊಂಡು ಮಾತನಾಡಿದ ಸಚಿವ ಜಮೀರ್ ವಿರುದ್ಧ ಎಸ್‌ಎಸ್ ಮಲ್ಲಿಕಾರ್ಜುನ್ ಕಿಡಿಕಾರಿದ್ದಾರೆ. ಅವನ್ಯಾರು ಇಲ್ಲಿ ಬಂದು ಮಾತನಾಡಲು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಪುತ್ರನಿಗೆ ಟಿಕೆಟ್ ಕೇಳಿಲ್ಲ ಹೈಕಮಾಂಡ್ ಹೇಳಿದಂತೆ ನಾವು ಪಾಲಿಸುತ್ತೇವೆ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ದಾವಣಗೆರೆ ಉಪ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿಯೇ ಆಂತರಿಕ ಭಿನ್ನಮತ ಎದುರಾಗಿದ್ದು, ದಾವಣಗೆರೆ ಉಸ್ತುವಾರಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರು ಸಚಿವ ಜಮೀರ್ ಅಹಮ್ಮದ್ ಖಾನ್ ನಡೆಯನ್ನು ಪ್ರಶ್ನೆ ಮಾಡಿದ್ದಾರೆ. ಅವನ್ಯಾರು ಇಲ್ಲಿ ಬಂದು ಮಾತನಾಡೋಕೆ, ಇವೆಲ್ಲಾ ಸರಿ ಇರಲ್ಲ ಎಂದು ಕಿಡಿಕಾರಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಇನ್ನೆರಡು ತಿಂಗಳಲ್ಲಿ ನಡೆಯಲಿದೆ. ಶಾಮನೂರು ಕುಟುಂಬ ಹಾಗೂ ಅಲ್ಪಸಂಖ್ಯಾತ ವರ್ಗದ ನಡುವೆ ಟಿಕೆಟ್‌ಗೆ ಭಾರೀ ಪೈಪೋಟಿ ಇದೆ. ಈ ನಡುವೆ, ಸಚಿವ ಜಮೀರ್ ಅವರು ಶಿವಶಂಕರಪ್ಪನವರು ಬದುಕಿದ್ದಾಗ ನನ್ನ ಬಳಿಕ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಎಂದು ಮಾತುಕೊಟ್ಟಿದ್ದರು ಎಂದು ಹೇಳಿಕೆ ನೀಡಿದ್ದರು. ಜತೆಗೆ ಹೈಕಮಾಂಡ್ ಮಟ್ಟದಲ್ಲಿಯೂ ಲಾಬಿ ನಡೆಸುತ್ತಿದ್ದರು. ಈ ಬಗ್ಗೆ ಎಸ್ಎಸ್ ಮಲ್ಲಿಕಾರ್ಜುನ್ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವನ್ಯಾರು ಇಲ್ಲಿ ಬಂದು ಮಾತನಾಡೋಕೆ?
ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಸ್‌ಎಸ್ ಮಲ್ಲಿಕಾರ್ಜುನ, "ಅವನ್ಯಾರು ಇಲ್ಲಿ ಬಂದು ಮಾತನಾಡೋಕೆ? ಇವು ನಮ್ಮ ಕ್ಷೇತ್ರಗಳು. ಇವೆಲ್ಲ ಸರಿ ಇರಲ್ಲ. ಇಲ್ಲಿ ಬಂದು ಮಾತನಾಡೋಕೆ ಅವನಿಗೆ ಅಧಿಕಾರ ಕೊಟ್ಟವರು ಯಾರು? ಈ ವಿಚಾರವಾಗಗಿ ಸಭೆ ಕರೆದಾಗ ನಾನು ಈ ಬಗ್ಗೆ ಮಾತನಾಡುತ್ತೇನೆ " ಎಂದು ಬೇಸರ ಹೊರ ಹಾಕಿದರು.
ಪುತ್ರನಿಗೆ ಟಿಕೆಟ್ ಕೇಳಿಲ್ಲ
" ಹೈಕಮಾಂಡ್ ಬಳಿ ನನ್ನ ಪುತ್ರನಿಗೆ ಟಿಕಟ್ ಕೇಳಿಲ್ಲ. ನಮ್ಮ ಕುಟುಂಬಕ್ಕೆ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿಲ್ಲ. ಪಕ್ಷದ ಸಭೆ ಕರೆದಾಗ ನಾಯಕರು ಏನು ಹೇಳುತ್ತಾರೆ ಎಂಬುವುದನ್ನು ಕೇಳುತ್ತೇವೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ ಅಂತಿಮವಾಗಿದ್ದು, ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡುತ್ತೇವೆ" ಎಂದು ಎಸ್‌ಎಸ್ ಮಲ್ಲಿಕಾರ್ಜುನ್ ಹೇಳಿದರು.
ದಕ್ಷಿಣದ ಅಭ್ಯರ್ಥಿ ಆಯ್ಕೆಗೆ ಸಮಿತಿ ರಚನೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಿದ್ಧತೆಯಾಗಿ ಕೆಪಿಸಿಸಿ ಅಭ್ಯರ್ಥಿ ಆಯ್ಕೆ ಸಮಿತಿ ರಚಿಸಿದೆ. ಮಾ.6ರಂದು ಬಿಡುಗಡೆಯಾದ ಅಧಿಕೃತ ಪತ್ರದಲ್ಲಿವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ್ ಭಂಡಾರಿ ಅವರನ್ನು ಸಮಿತಿಯ ಕನ್ವೀನರ್ ಆಗಿ ನೇಮಿಸಲಾಗಿದೆ. ಸಮಿತಿಯಲ್ಲಿಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ , ಸಚಿವರಾದ ಕೆ.ಎಚ್. ಮುನಿಯಪ್ಪ, ಜಮೀರ್ ಅಹ್ಮದ್ ಖಾನ್, ಈಶ್ರ್ವ ಖಂಡ್ರೆ, ಕೃಷ್ಣ ಭೈರೆಗೌಡ, ಶರಣಪ್ರಕಾಶ್ ಪಾಟೀಲ…, ಪ್ರಿಯಾಂಕ್ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್, ಸಂತೋಷ್ ಲಾಡ್, ಮಧು ಸೈಲ್, ಸಲೀಂ ಅಹ್ಮದ್, ತನ್ವೀರ್ ಸೇಠ್, ವಿ.ಆರ್. ಸುದರ್ಶನ್, ಎಚ್.ಎಂ. ರೇವಣ್ಣ ಸೇರಿ ಒಟ್ಟು 16 ಮಂದಿ ಸದಸ್ಯರಿದ್ದಾರೆ. ಸಮಿತಿಯವರು ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕಿಸಿ, 2023/2024ರ ಚುನಾವಣಾ ಅನುಭವಗಳನ್ನು ಪರಿಗಣಿಸಿ ಸೂಕ್ತ ಅಭ್ಯರ್ಥಿ ಶಿಫಾರಸು ಮಾಡಬೇಕೆಂದು ಸೂಚಿಸಲಾಗಿದೆ

Comments
Post a Comment