ನನ್ನ ಮತ್ತು ಸಚಿವ ಮಲ್ಲಿಕಾರ್ಜುನ್ ನಡುವೆ ಯಾವುದೇ ಮನಸ್ತಾಪವಿಲ್ಲ: ಸಚಿವ ಝಮೀರ್ ಅಹ್ಮದ್


 ದಾವಣಗೆರೆ: ನಮ್ಮ ಮತ್ತು ಸಚಿವ ಮಲ್ಲಿಕಾರ್ಜುನ್ ನಡುವೆ ಯಾವುದೇ ಮನಸ್ತಾಪವಾಗಲೀ, ಮುನಿಸಾಗಲೀ ಇಲ್ಲ. ಇದೆಲ್ಲವೂ ಮಾಧ್ಯಮದ ಸೃಷ್ಟಿ ಮಾತ್ರ ಎಂದು ಸಚಿವ ಬಿ.ಝಡ್ ಝಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದರು.


ನಗರದ ಸಚಿವ ಮಲ್ಲಿಕಾರ್ಜುನ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಲ್ಲಿಕಾರ್ಜುನ್ ಮತ್ತು ನಾವು ಆತ್ಮೀಯ ಸ್ನೇಹಿತರು. ನಾವು ಏಕವಚನದಲ್ಲಿ ಮಾತನಾಡಿಸಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಎ. 5 ರಂದು ದಾವಣಗೆರೆಗೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಪರ ಪ್ರಚಾರಕ್ಕೆ ಬಂದ್ದಿದ್ದೇನೆ. ದಾವಣಗೆರೆ ದಕ್ಷಿಣ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದು, ಯಾರು ಬಂದರೂ, ಬರದಿದ್ದರೂ ಕಾಂಗ್ರೆಸ್ ಗೆಲ್ಲಲಿದೆ. ಸಮುದಾಯ ಮತ್ತು ಪಕ್ಷದಲ್ಲಿ ಕೆಲವರುಅಸಮಾಧಾನಗೊಂಡಿದ್ದು ಅವರನ್ನು ಮಾತನಾಡಿಸಿ ಸಮಾಧಾನ ಪಡಿಸಿ ಕೆಲಸ ಮಾಡುವಂತೆ ತಿಳಿಸುತ್ತೇನೆ ಎಂದು ಹೇಳಿದರು.

ಪಕ್ಷದ ಸಂಪ್ರದಾಯದಂತೆ ಅನುಕಂಪದ ಹಿನ್ನಲೆಯಲ್ಲಿ ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಖಾಸಗಿ ಸಮಾರಂಭಕ್ಕೆಂದು ನಗರಕ್ಕೆ ಬಂದಾಗ ಆಹಿಂದ ಸಮಾಜದವರು ಮುಖ್ಯವಾಗಿ ಮುಸ್ಲಿಂ ಸಮಾಜದ ಮುಖಂಡರು ನನ್ನನ್ನು ದಾವಣಗೆರೆ ದಕ್ಷಿಣದ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಿಸುವಂತೆ ಕೇಳಿದ್ದರು. ಈ ಹಿನ್ನಲೆಯಲ್ಲಿ ನಾವು ಹೈಕಮಾಂಡಗೆ ಟಿಕೆಟ್‍ಗಾಗಿ ಬೇಡಿಕೆ ಇಟ್ಟಿದ್ದವು. ಅದರೆ, ಟಿಕೆಟ್ ಕೊಡುವುದು ಹೈಕಮಾಂಡ್ ನಿರ್ಧಾರ. 224 ಕ್ಷೇತ್ರಗಳು ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕ್ ಗಾಂಧಿ, ರಾಹುಲ್ ಗಾಂಧಿ ಅವರ ಕ್ಷೇತ್ರಗಳಾಗಿದ್ದು ಅವರು ಯಾರಿಗೆ ಬೇಕಾದರೂ ಟಿಕೆಟ್ ಕೊಡಬಹುದು ಎಂದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದು 3 ಸಾವಿರ ಮತ ಪಡೆದಿದ್ದರು. ಈ ಬಾರಿ 11 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದು ಅವರನ್ನು ಮನವೊಲಿಸುವ ಕೆಲಸ ಮಾಡುತ್ತೇವೆ. ವಿಧಾನಪರಿಷತ್ ಸದಸ್ಯ ಜಬ್ಬಾರ್ ಸಾಬ್ ಸೇರಿದಂತೆ ಅಸಮಾಧಾನಿತ ಎಲ್ಲಾ ಕಾಂಗ್ರೆಸ್ ಸದಸ್ಯರು ಒಂದೇ ಕುಟುಂಬವಿದ್ದಂತೆ. ಕುಟುಂಬದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಅಸಮಾಧಾನಿತರೊಂದಿಗೆ ಮಾತನಾಡಿ ಪ್ರಚಾರಕ್ಕೆ ಕರೆಯುತ್ತೇನೆ ಎಂದು ತಿಳಿಸಿದರು.


ಸಚಿವ ಮಲ್ಲಿಕಾರ್ಜುನ್ ಮಾತನಾಡಿ, ಝಮೀರ್ ಮತ್ತು ನಾವು ಆತ್ಮೀಯ ಸ್ನೇಹಿತರು. ನಾವು ಆತ್ಮೀಯವಾಗಿ ಬಾರೋ ..ಹೋಗೋ ಎಂದು ಏಕವಚನದಲ್ಲಿಯೇ ಮಾತನಾಡಿಕೊಳ್ಳುತ್ತೇವೆ. ಮಾತನಾಡುವ ಬರದಲ್ಲಿ ನಾನು ಅಂದು ಆ ರೀತಿ ಮಾತನಾಡಿರುವುದು. ಅದನ್ನು ಬೆಳಸಿಕೊಂಡು ಹೋಗುವ ಅಗತ್ಯವಿಲ್ಲ. ನಮ್ಮ ಮಧ್ಯೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಹೇಳಿದರು.


ರಾಜ್ಯ ಚುನಾವಣಾ ಉಸ್ತುವಾರಿ ಅಭಿಷೇಕ ದತ್ತ, ಸಚಿವ ಎಂ.ಸಿ. ಸುಧಾಕರ, ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಇತರರು ಇದ್ದರು.

ಅಸಮಾಧಾನಕ್ಕೆ ತೆರೆ


ಸಚಿವರಾದ ಮಲ್ಲಿಕಾರ್ಜುನ್ ಮತ್ತು ಝಮೀರ್ ಅಹಮದ್ ನಡುವೆ ಉಂಟಾಗಿದ್ದ ಅಸಮಾಧಾನಕ್ಕೆ ಕೊನೆಗೂ ರವಿವಾರ ಝಮೀರ್ ಆಹಮದ್ ಅವರೇ ನಗರಕ್ಕೆ ಆಗಮಿಸುವ ಮೂಲಕ ತೆರೆ ಎಳೆಯುವ ಪ್ರಯತ್ನ ಮಾಡಿದರು.

Comments

Popular posts from this blog

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ಕೊಟ್ಟೂರು ತಾಲ್ಲೂಕಿನ ಕೋಗಲಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!