ತಂದೆ ಹ್ಯಾರಿಸ್ ಗೂ ED ದಾಳಿಗೂ ಯಾವುದೇ ಸಂಬಂಧವಿಲ್ಲ; ನಾನು ಒಬ್ಬ ಒಳ್ಳೆಯ ಮಗನಾಗಲು ಸಾಧ್ಯವಾಗಲೇ ಇಲ್ಲ: ಅಳಲು ತೋಡಿಕೊಂಡ ನಲಪಾಡ್
ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ದಾಳಿ ಬೆನ್ನಲ್ಲೇ ಮಾತನಾಡಿರುವ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್, ಇಡಿ ದಾಳಿಗೂ ನಮ್ಮ ತಂದೆ ಹಾರಿಸ್ ಅವರಿಗೂ ಯಾವುದೇ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಡಿ ದಾಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಲಪಾಡ್, ಈ ದಾಳಿಯು ತಮ್ಮ ಮತ್ತು ತಮ್ಮ ಸಹೋದರ ಉಮರ್ ಹ್ಯಾರಿಸ್ ನಲಪಾಡ್ ಅವರನ್ನು ಗುರಿಯಾಗಿಸಿಕೊಂಡು ನಡೆದಿದೆ ಎಂದಿದ್ದಾರೆ.
2021 ರಲ್ಲಿ ಇಡಿಯಲ್ಲಿ ಇಸಿಐಆರ್ (ECIR) ದಾಖಲಾಗಿತ್ತು. ಈಗ 2026ರಲ್ಲಿ ಇಡಿ ಅಧಿಕಾರಿಗಳು ನಮ್ಮ ಮನೆ ಮೇಲೆ ದಾಅಳಿ ನಡೆಸಿದ್ದಾರೆ. ಯಾರಾದರೂ ಕ್ರೈಮ್ ಮಾಡಿದ್ದರೆ ಆರು ವರ್ಷಗಳ ಕಾಲ ಸಾಕ್ಷ್ಯಗಳನ್ನು ಇಟ್ಟುಕೊಂಡು ಮನೆ ಶೋಧ ಮಾಡಲು ಕಾಯುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
ತಮ್ಮ ತಂದೆ ಸಚಿವ ಸ್ಥಾನ ಪಡೆಯುವುದನ್ನು ತಡೆಯಲು ರಾಜಕೀಯ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ. ಇಡಿ ಅಧಿಕಾರಿಗಳು ನಮ್ಮ ನಿವಾಸಕ್ಕೆ ಬಂದಿದ್ದು, ನಾವು ಹಾರಿಸ್ ಅವರ ಮಕ್ಕಳು ಮತ್ತು ಆ ಮನೆಯಲ್ಲಿ ವಾಸಿಸುತ್ತಿರುವುದರಿಂದ ಮಾತ್ರ. ಈ ಪ್ರಕರಣಕ್ಕೂ ಮತ್ತು ನಮ್ಮ ತಂದೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ತಮ್ಮ ತಂದೆಗೆ ಮಂತ್ರಿ ಸ್ಥಾನ ಸಿಗದಂತೆ ತಡೆಯಲು ಮತ್ತು ಅವರ ಮೇಲೆ ಗೂಬೆ ಕೂರಿಸುವ ಉದ್ದೇಶದಿಂದ ನಡೆದಿದೆ ಎಂದು ನಲಪಾಡ್ ಆರೋಪಿಸಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದ್ದು, ಕೇಂದ್ರದ ಬಿಜೆಪಿಯವರು ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದಾರೆ. ಬಿಟ್‌ಕಾಯಿನ್ ಪ್ರಕರಣದ ಕುರಿತು 2020 ರಲ್ಲಿ ಸದನದಲ್ಲಿ ಬಿಜೆಪಿಯೇ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿತ್ತು. ಅಲ್ಲದೆ, ಎಸ್ಐಟಿ ತನಿಖೆಯಲ್ಲೂ ಯಾವುದೇ ರೀತಿಯ ಅಕ್ರಮಗಳು ಪತ್ತೆಯಾಗಿಲ್ಲ. ಆದರೂ ಈಗ ನನ್ನ ಮತ್ತು ಸಹೋದರನ ಮೇಲೆ ದಾಳಿ ನಡೆಸಲಾಗಿದೆ. ಇದು ರಾಜಕೀಯ ಪ್ರೇರಿತವಾದ ದಾಳಿ ಎಂದು ಕಿಡಿಕಾರಿದರು.
ಇಡಿಯವರು ದಾಳಿ ನಡೆಸಿದ್ದಾರೆ. ಅವರ ಕೆಲಸ ಅವರು ಮಾಡಿದ್ದಾರೆ. ಸುಮಾರು 21 ಗಂಟೆಗಳ ಕಾಲ ಸರ್ಚ್ ಮಾಡಿ ಬರಿ ಎರಡು ಮೊಬೈಲ್ ಗಳನ್ನು ಮಾತ್ರ ತೆಗೆದುಕೊಂಡಿದ್ದಾರೆ. ಯಾವುದೇ ನಯಾಪೈಸೆ ಕೂಡ ಅವರಿಗೆ ಪತ್ತೆಯಾಗಿಲ್ಲ ಎಂದರು.
ಇದೇ ವೇಳೆ ನಾನು ಒಬ್ಬ ಒಳ್ಳೆಯ ಮಗನಂತೂ ಆಗಲು ಸಾಧ್ಯವಾಗಿಲ್ಲ. ಯಾವಾಗಲೂ ನನ್ನ ತಂದೆ ತಾಯಿಗೆ ನನ್ನಿಂದ ಕೆಟ್ಟದ್ದೇ ಆಗಿದೆ ಎಂದು ಭಾವುಕರಾಗಿದರು. ನಾನು ಕಷ್ಟಪಟ್ಟು ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿ, ಪೋಷಕರಿಗೆ ಒಳ್ಳೆಯ ಹೆಸರು ತರಲು ಪ್ರಯತ್ನಿಸುತ್ತಿದ್ದೇನೆ. ನಮ್ಮ ತಂದೆಯಂತೆ ಉತ್ತಮ ಮಗನಾಗಿ ಬಾಳಲು ಪ್ರಯತ್ನಿಸುತ್ತಿದ್ದರೂ, ಯಾವುದೋ ಒಂದು ಕೇಸ್ ಇಟ್ಟುಕೊಂಡು ಪ್ರತಿ ಬಾರಿ ಇಂತಹ ನಮ್ಮ ಕುಟುಂಬವನ್ನು ಗುರಿಯಾಗಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Comments
Post a Comment