ದಾವಣಗೆರೆ: ಮತಗಟ್ಟೆ ಬಳಿ ಟೇಬಲ್ ವಿಚಾರವಾಗಿ ಕಾಂಗ್ರೆಸ್-SDPI ಕಾರ್ಯಕರ್ತರ ನಡುವೆ ಗಲಾಟೆ
ದಾವಣಗೆರೆ: ನಗರದ ಮಹಬೂಬ್ ನಗರದ ಮುಖ್ಯ ರಸ್ತೆಯ ಅಲಾ ಹಜರತ್ ಚೌಕದ ಬಳಿ ಗುರುವಾರ ಕಾಂಗ್ರೆಸ್ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ಮತ್ತು ಗಲಾಟೆ ನಡೆದಿದೆ.
ಘಟನೆಯ ಹಿನ್ನೆಲೆ:
ನಗರದ ವಾರ್ಡ್ ಸಂಖ್ಯೆ 4 ರ ಮಿಲ್ಲತ್ ಶಿಕ್ಷಣ ಸಂಸ್ಥೆಯಲ್ಲಿ ಆರು ಮತಗಟ್ಟೆಗಳಿರುವುದರಿಂದ, ಮತದಾರರಿಗೆ ಅನುಕೂಲ ಮಾಡಿಕೊಡಲು ರಸ್ತೆಯ ಇಕ್ಕೆಲಗಳಲ್ಲಿ ಕಾಂಗ್ರೆಸ್ ಮತ್ತು SDPI ಕಾರ್ಯಕರ್ತರು ಪ್ರತ್ಯೇಕ ಟೇಬಲ್‌ಗಳನ್ನು ಹಾಕಿಕೊಂಡಿದ್ದರು. ಮತದಾನದ ಕೊನೆಯ ಕ್ಷಣದಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ಉಭಯ ಪಕ್ಷಗಳ ಕಾರ್ಯಕರ್ತರು ತೀವ್ರ ಪ್ರಯತ್ನ ನಡೆಸುತ್ತಿದ್ದರು.
SDPI ಪ್ರಚಾರ: ಕಾರ್ಯಕರ್ತರು ಕುಕ್ಕರ್ ಚಿಹ್ನೆ ಹಾಗೂ 4ನೇ ಸಂಖ್ಯೆಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದರು.
ಕಾಂಗ್ರೆಸ್ ಪ್ರಚಾರ: ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು 3ನೇ ಸಂಖ್ಯೆಯ ಹಸ್ತದ ಗುರುತಿಗೆ ಮತ ನೀಡುವಂತೆ ಕೋರುತ್ತಿದ್ದರು.
ಗಲಾಟೆಗೆ ಕಾರಣ:
ಮುಖ್ಯ ರಸ್ತೆಯಿಂದ ಹಿಂದೆ ಸರಿಯುವಂತೆ ಮತ್ತು ಟೇಬಲ್ ತೆರವುಗೊಳಿಸುವಂತೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಹಾಗೂ ಇತರ ನಾಯಕರು SDPI ಮುಖಂಡರಿಗೆ ತಾಕೀತು ಮಾಡಿದರು. ಇದಕ್ಕೆ SDPI ಕಾರ್ಯಕರ್ತರು ಒಪ್ಪದಿದ್ದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಈ ಹಂತದಲ್ಲಿ ಕಾಂಗ್ರೆಸ್ ಮುಖಂಡರು SDPI ನವರ ಟೇಬಲ್ ಅನ್ನು ಎತ್ತಿ ಬಿಸಾಡಿದರು ಎನ್ನಲಾಗಿದೆ.
ಇದರಿಂದ ಎರಡು ಪಕ್ಷಗಳ ಮುಖಂಡರ ನಡುವೆ ತೀವ್ರ ವಾಗ್ವಾದ ಉಂಟಾಗಿ ಸ್ಥಳದಲ್ಲಿ ಜನಜಂಗುಳಿ ಸೇರಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮಧ್ಯಪ್ರವೇಶಿಸಿ, ಲಘು ಲಾಠಿ ಪ್ರಹಾರದ ಮೂಲಕ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ವರದಿ: ಟಿವಿ ನ್ಯೂಸ್ ಕನ್ನಡ

Comments
Post a Comment