ಚನ್ನಗಿರಿ: ದರಖಾಸ್ತು ಜಮೀನು ಪೋಡಿ ವರದಿಗೆ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಸರ್ವೆ ಸೂಪರ್ ವೈಸರ್!


 ಚನ್ನಗಿರಿ: ದರಖಾಸ್ತು ಜಮೀನಿನ ಪೋಡಿ (Podhi) ತಾಂತ್ರಿಕ ವರದಿಯನ್ನು ನೀಡಲು ₹50,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಸರ್ವೆ ಸೂಪರ್ ವೈಸರ್ ಒಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಚನ್ನಗಿರಿಯಲ್ಲಿ ನಡೆದಿದೆ.

ಘಟನೆಯ ವಿವರ:

ಚನ್ನಗಿರಿ ತಾಲ್ಲೂಕಿನ ಮಧುರ ನಾಯಕನಹಳ್ಳಿಯ ಸರ್ವೆ ನಂಬರ್ 46ರಲ್ಲಿ ಎ.ಬಿ. ಕುಮಾರ್ ನಾಯಕ್ ಎಂಬುವವರಿಗೆ ಸೇರಿದ 4 ಎಕರೆ ದರಖಾಸ್ತು ಜಮೀನಿನ ಪೋಡಿ ತಿದ್ದುಪಡಿ ಹಾಗೂ ದುರಸ್ತಿಗಾಗಿ ಭೂದಾಖಲೆಗಳ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಕೆಲಸಕ್ಕಾಗಿ ಸರ್ವೆ ಸೂಪರ್ ವೈಸರ್ ಕೆ.ಎಚ್. ಅಂಜಪ್ಪ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದರು.


ಕುಮಾರ್ ನಾಯಕ್ ಅವರು ಈ ಹಿಂದೆ ಭೂದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಪರಿಶೀಲಿಸಿದ ಜಂಟಿ ನಿರ್ದೇಶಕರು ತಾಂತ್ರಿಕ ವರದಿ ನೀಡುವಂತೆ ತಾಲೂಕು ಸಹಾಯಕ ನಿರ್ದೇಶಕರಿಗೆ (ADLR) ಸೂಚಿಸಿದ್ದರು. ಈ ಜವಾಬ್ದಾರಿಯನ್ನು ಸರ್ವೆ ಸೂಪರ್ ವೈಸರ್ ಕೆ.ಎಚ್. ಅಂಜಪ್ಪ ಅವರಿಗೆ ವಹಿಸಲಾಗಿತ್ತು. ಸರ್ವೆ ಕಾರ್ಯ ಪೂರ್ಣಗೊಳಿಸುವ ನೆಪದಲ್ಲಿ ಅವರು ಲಂಚಕ್ಕೆ ಪೀಡಿಸುತ್ತಿದ್ದರು.

ಶುಕ್ರವಾರ ರಾತ್ರಿ ಚನ್ನಗಿರಿ ನಗರದ ಹಳೆ ಬಸ್ ನಿಲ್ದಾಣದ ಬಳಿ ಲಂಚ ಪಡೆಯುತ್ತಿದ್ದಾಗ ಅಂಜಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವರದಿ: - ಟಿವಿ ನ್ಯೂಸ್ ಕನ್ನಡ ಏಷ್ಯನ್ ನೆಟ್‌ವರ್ಕ್

Comments

Popular posts from this blog

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!

ಕೊಟ್ಟೂರು ತಾಲ್ಲೂಕಿನ ಕೋಗಲಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ