ದಾವಣಗೆರೆ: ಮಾಜಿ ಸಚಿವ, ದಿವಂಗತ ಶಾಮನೂರು ಶಿವಶಂಕರಪ್ಪ ಅವರ 96ನೇ ಜನ್ಮದಿನದ ಅಂಗವಾಗಿ ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ 60 ಜೋಡಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


 ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು–ವರರಿಗೆ ಸಂಸದೆ ಡಾ.ಪ್ರಭಾ ಹಾಗೂ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಶುಭ ಹಾರೈಸಿದರು   

ದಾವಣಗೆರೆ: ಮಾಜಿ ಸಚಿವ, ದಿವಂಗತ ಶಾಮನೂರು ಶಿವಶಂಕರಪ್ಪ ಅವರ 96ನೇ ಜನ್ಮದಿನದ ಅಂಗವಾಗಿ ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ 60 ಜೋಡಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅಭಿಮಾನಿ ಬಳಗ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಿತ್ತು. ವಧು–ವರರ ಕುಟುಂಬದ ಸದಸ್ಯರು, ಸಂಬಂಧಿಕರು ಆಗಮಿಸಿದ್ದರಿಂದಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ನವ ದಂಪತಿಗಳನ್ನು ಹರಸಿದರು.

ಮದುವೆಗೆ ಆಗಮಿಸಿದ್ದ ಸಂಬಂಧಿಕರಿಗೆ ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ವಧು–ವರರಿಗೆ ಕಾಲುಂಗರ, ಮಾಂಗಲ್ಯ, ಅಲ್ಮೇರಾ ಹಾಗೂ ಬಟ್ಟೆಗಳನ್ನು ಉಚಿತವಾಗಿ ನೀಡಲಾಯಿತು.

ವಿಧಾನಪರಿಷತ್‌ ಚುನಾವಣೆಯ ಅಂಗವಾಗಿ ಬೆಂಗಳೂರಿನಲ್ಲಿ ಕರೆದಿರುವ ಶಾಸಕಾಂಗ ಪಕ್ಷದ ಸಭೆಯ ಮಧ್ಯೆಯೇ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮುಖ್ಯಮಂತ್ರಿ ಅನುಮತಿ ಪಡೆದು ಬಂದಿದ್ದ ಅವರು ‘ಸಂಸಾರದಲ್ಲಿ ಪತಿ–ಪತ್ನಿಯ ನಡುವೆ ಹೊಂದಾಣಿಕೆ ಮುಖ್ಯ. ಸಾಮರಸ್ಯದ ಬದುಕು ಕಟ್ಟಿಕೊಂಡು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ’ ಎಂದು ಕಿವಿಮಾತು ಹೇಳಿದರು.

‘ಸತಿ–ಪತಿ ರಥದ ಎರಡು ಚಕ್ರಗಳಿದ್ದಂತೆ. ಹೊಂದಾಣಿಕೆಯಿಂದ ಇದ್ದಾಗ ಮಾತ್ರ ಸಂಸಾರದ ಬಂಡಿ ಸುಗಮವಾಗಿ ಸಾಗಲು ಸಾಧ್ಯ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸಲಹೆ ನೀಡಿದರು.

‘ಶಾಮನೂರು ಶಿವಶಂಕರಪ್ಪ ಅವರಲ್ಲಿದ್ದ ಕಾಳಜಿ, ತಾಳ್ಮೆ ಎಲ್ಲರಿಗೂ ಮಾದರಿ. ಅವರ ಗುಣಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರು ಮಾಡಿದ ಉತ್ತಮ ಕೆಲಸಗಳು ಇಂದಿಗೂ ಉಳಿದಿವೆ. ಶಿವಶಂಕರಪ್ಪ ಅವರ ಹೆಸರಿನಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅಭಿಮಾನಿ ಬಳಗ 2007ರಿಂದ ನಿರಂತರವಾಗಿ ಸಾಮೂಹಿಕ ವಿವಾಹ ಸಮಾರಂಭ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಮನೂರು ಶಿವಶಂಕರಪ್ಪ ಅವರ ಬದುಕಿನ ಕುರಿತು ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡಿದರು. ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ‘ಧೂಡಾ’ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮಾಜಿ ಶಾಸಕ ಎಸ್. ರಾಮಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಮೇಯರ್‌ ಕೆ.ಚಮನ್ ಸಾಬ್, ಅಭಿಮಾನಿ ಬಳಗದ ಪ್ರಮುಖರಾದ ಪರಶುರಾಮ್, ಮುದೇಗೌಡರ ಗಿರೀಶ್, ಟಿ. ಬಸವರಾಜ್ ಶಾಮನೂರು, ಮಂಜುನಾಥ್ ಗಡಿಗುಡಾಳ್ ಹಾಜರಿದ್ದರು.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!