ಲಂಚ ನೇರವಾಗಿ ಪಡೆಯದಿದ್ದರೂ ಸರ್ಕಾರಿ ನೌಕರ ಅಪರಾಧಿ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!
ಲಂಚ ನೇರವಾಗಿ ಸ್ವೀಕರಿಸದಿದ್ದರೂ ಸರ್ಕಾರಿ ನೌಕರ ಅಪರಾಧಿ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!
ಹೊಸದಿಲ್ಲಿ: ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸರ್ಕಾರಿ ನೌಕರನೊಬ್ಬ ತಪ್ಪಿತಸ್ಥನೆನಿಸಿಕೊಳ್ಳಲು ಲಂಚದ ಹಣವನ್ನು ನೇರವಾಗಿ ತಾನೇ ಆಯಾ ವ್ಯಕ್ತಿಯಿಂದ ಸ್ವೀಕರಿಸಬೇಕೆಂದೇನೂ ಇಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ತನ್ನ ಕೈಕೆಳಗಿನ ಅಧೀನ ನೌಕರರ ಮೂಲಕ ಅಥವಾ ಮತ್ತೊಬ್ಬ ವ್ಯಕ್ತಿಯ ಪರವಾಗಿ ಲಂಚಕ್ಕೆ ಬೇಡಿಕೆ ಇಟ್ಟರೂ ಅಥವಾ ಲಂಚ ಪಡೆದರೂ ಅದು ಅಪರಾಧ ಮುಕ್ತವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (SI) ಆಗಿದ್ದ ಕೆ. ರಂಗಯ್ಯ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ (FIR) ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಇದೀಗ ವಜಾಗೊಳಿಸಿದೆ.
ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಬ್ರೇಕ್:
ಸಬ್ ಇನ್ಸ್‌ಪೆಕ್ಟರ್ ರಂಗಯ್ಯ ಅವರು ನೇರವಾಗಿ ಲಂಚದ ಬೇಡಿಕೆ ಇಟ್ಟಿಲ್ಲ ಅಥವಾ ವೈಯಕ್ತಿಕವಾಗಿ ಲಂಚದ ಹಣವನ್ನು ಸ್ವೀಕರಿಸಿಲ್ಲ ಎಂಬ ಅಭಿಪ್ರಾಯದೊಂದಿಗೆ ಕರ್ನಾಟಕ ಹೈಕೋರ್ಟ್ ಜೂನ್ 2023 ರಲ್ಲಿ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಪರವಾಗಿ ವಕೀಲ ನಿಶಾಂತ್ ಪಾಟೀಲ್ ಅವರು ಪ್ರಬಲ ವಾದ ಮಂಡಿಸಿದ್ದರು. ಈ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಜಸ್ಟಿಸ್ ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು ಹೈಕೋರ್ಟ್ ಆದೇಶವನ್ನು ತಳ್ಳಿಹಾಕಿ ಮೇ 26 ರಂದು ಈ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ಉಲ್ಲೇಖಿಸಿದ ಪ್ರಮುಖ ಅಂಶಗಳು:
ಸೆಕ್ಷನ್ 7ರ ಅಡಿ ಅಪರಾಧ: ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 7ರ ಅಡಿ ಆರೋಪಕ್ಕೊಳಗಾಗುವ ಯಾವುದೇ ಸರ್ಕಾರಿ ನೌಕರ ತನಗಾಗಿ ಅನುಚಿತ ಲಾಭ ಪಡೆದರೆ ಮಾತ್ರ ಪ್ರಕರಣದ ವ್ಯಾಪ್ತಿಗೆ ಬರುತ್ತಾನೆ ಎಂದಲ್ಲ. ಬದಲಿಗೆ, ಬೇರೊಬ್ಬ ವ್ಯಕ್ತಿಗಾಗಿ ಅನುಚಿತ ಲಾಭ ಪಡೆಯುವುದೂ ಸಹ ಅಪರಾಧ ಕೃತ್ಯವೇ ಆಗುತ್ತದೆ.
ಅಧೀನ ನೌಕರರ ಬಳಕೆ: ಸರ್ಕಾರಿ ನೌಕರನೊಬ್ಬ ಹಿನ್ನೆಲೆಯಲ್ಲಿ ನಿಂತು, ತನ್ನ ಅಧೀನ ನೌಕರರ ಮೂಲಕ ಲಂಚಕ್ಕಾಗಿ ಬೇಡಿಕೆ ಇಡುವುದೂ ಸಹ ಭ್ರಷ್ಟಾಚಾರ ಅಪರಾಧದ ವ್ಯಾಪ್ತಿಗೆ ಒಳಪಡುತ್ತದೆ.
ಸ್ಥಾನದ ದುರುಪಯೋಗ: ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 7ರ ಅಡಿಯ 2(i) ವಿವರಣೆಯ ಪ್ರಕಾರ, ಸಾರ್ವಜನಿಕ ಸೇವಕನೊಬ್ಬ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಅಥವಾ ಮತ್ತೊಬ್ಬ ಸಾರ್ವಜನಿಕ ಸೇವಕನ ಮೇಲೆ ಪ್ರಭಾವ ಬೀರಲು ಮತ್ತೊಬ್ಬರಿಗೆ ಅಕ್ರಮ ಲಂಚವನ್ನು ಪಡೆದರೆ, ಅದು ಭ್ರಷ್ಟಾಚಾರ ಪ್ರಕರಣದ ವ್ಯಾಪ್ತಿಗೆ ಒಳಪಡುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.
ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್, ಭ್ರಷ್ಟ ಅಧಿಕಾರಿಗಳಿಗೆ ಈ ತೀರ್ಪಿನ ಮೂಲಕ ಬಿಸಿ ಮುಟ್ಟಿಸಿದೆ.
ವಿಶೇಷ ವರದಿ: TV News Kannada Asian Network

Comments
Post a Comment