ದಾವಣಗೆರೆಯಲ್ಲಿ ಗಗನಚುಂಬಿ ಕಟ್ಟಡಕ್ಕೆ ಅನುಮತಿ; ದೂಡಾ ಹೊಸ ಲೇಔಟ್‌ಗಳ ನಿರ್ಮಾಣಕ್ಕೆ ಯತೀಂದ್ರ ಸಿದ್ದರಾಮಯ್ಯ ಸೂಚನೆ


 ದಾವಣಗೆರೆ ನಗರದಲ್ಲಿ ಹೈರೈಸ್ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವ ಮೂಲಕ ಟೈರ್-2 ನಗರಗಳನ್ನು ಅಭಿವೃದ್ಧಿಪಡಿಸಲು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಎಫ್‌ಎಆರ್‌ ಹೆಚ್ಚಳದಿಂದ ಪಾಲಿಕೆಗೆ ಆದಾಯ ಬರುತ್ತದೆ ಎಂದರು. ಅಲ್ಲದೆ, ಕುಂದುವಾಡದಲ್ಲಿ ರೈತರ ವಿರೋಧವಿದ್ದಲ್ಲಿ ಬಡಾವಣೆ ನಿರ್ಮಿಸದೆ, ಬಾತಿಯಂತಹ ಲೇಔಟ್‌ಗೆ ಸಿದ್ಧವಿರುವ ಕಡೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮತ್ತು ಕುಡಿಯುವ ನೀರು, ಇ-ಸ್ವತ್ತು ಸೇವೆಗಳಲ್ಲಿ ಲೋಪವಾಗದಂತೆ ನೋಡಿಕೊಳ್ಳಲು ಸೂಚಿಸಿದರು.

ದಾವಣಗೆರೆ: ದಾವಣಗೆರೆ ನಗರದ ವ್ಯಾಪ್ತಿಯಲ್ಲಿ ಹೈರೈಸ್‌ ಬಿಲ್ಡಿಂಗ್‌ಗಳ (ಗಗನಚುಂಬಿ ಕಟ್ಟಡ) ನಿರ್ಮಾಣಕ್ಕೆ ಅನುಮತಿ ನೀಡಿ, ಇದರಿಂದ ದಾವಣಗೆರೆ ರೀತಿಯ ಎರಡನೇ ಹಂತದ ನಗರಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ,'' ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸಲಹೆ ನೀಡಿದರು.

ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ''ಎರಡನೇ ಹಂತದ ನಗರಗಳು (ಟೈರ್‌-2 ಸಿಟಿ) ತ್ವರಿತವಾಗಿ ಅಭಿವೃದ್ಧಿ ಸಾಧಿಸಬೇಕೆಂದರೆ ಇಲ್ಲಿದೊಡ್ಡ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವುದು ಅನಿವಾರ್ಯ'' ಎಂದರು.

ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಪೂರಕವಾಗಿ ಫ್ಲೋರ್‌ ಏರಿಯಾ ರೇಷಿಯೋ (ಎಫ್‌ಎಆರ್‌) ಕೂಡ ಹೆಚ್ಚಿಸಬೇಕಾಗುತ್ತದೆ. ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಪ್ರೀಮಿಯಂ ಎಫ್‌ಎಆರ್‌ ಇರುತ್ತದೆ. ಹೀಗಾಗಿ ಬಿಲ್ಡರ್‌ಗಳು ಅಥವಾ ಬಹು ಮಹಡಿ ಕಟ್ಟಡ ನಿರ್ಮಿಸುವವರು ನಿಗದಿತ ಶುಲ್ಕ ಪಾವತಿಸಿ ಅನುಮತಿ ಪಡೆಯಬೇಕು. ಇದರಿಂದ ಸ್ಥಳೀಯ ಸಂಸ್ಥೆ, ಪ್ರಾಧಿಕಾರ ಹಾಗೂ ಸರಕಾರಕ್ಕೂ ಆದಾಯ ಬರುತ್ತದೆ. ಹೀಗಾಗಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆಯಿಂದ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಬೇಕು,' ಎಂದು ತಿಳಿಸಿದರು.

ಸಚಿವರು ಬಹುಮಹಡಿ ಕಟ್ಟಡಗಳ ನಿರ್ಮಾಣದ ವಿಷಯ ಪ್ರಸ್ತಾಪಿಸಿದಾಗ ಸಹಮತ ಸೂಚಿಸಿದ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ್‌, 'ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ 21 ಮೀಟರ್‌ ಅಥವಾ ಮೂರುವರೆ ಮಹಡಿ ಕಟ್ಟಡ ನಿರ್ಮಾಣ ಮಾಡಲು ಮಾತ್ರ ಅನುಮತಿ ನೀಡಲಾಗುತ್ತಿದೆ. ಸಮಯ ಬದಲಾಗಿದ್ದು, ಮಹಡಿಗಳ ಸಂಖ್ಯೆ ಹೆಚ್ಚಿಸಲು ಅನುಮತಿ ನೀಡುವ ಅಗತ್ಯವಿದೆ. ಹುಬ್ಬಳ್ಳಿ ನಗರದಲ್ಲಿ ಎಷ್ಟು ಮಹಡಿ ಮತ್ತು ಎಷ್ಟು ಮೀಟರ್‌ ಎತ್ತರದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇದೆ ಎಂಬುದನ್ನು ಪರಿಶೀಲಿಸಿ, ಆ ಮಾದರಿಯನ್ನೇ ಇಲ್ಲೂಅಳವಡಿಸಬಹುದು,' ಎಂದು ಸಲಹೆ ನೀಡಿದರು.


28 ಸಾವಿರ ನಿವೇಶನಕ್ಕೆ ಬೇಡಿಕೆ

'ದೂಡಾ ವ್ಯಾಪ್ತಿಯಲ್ಲಿ 28,000 ನಿವೇಶನಗಳಿಗೆ ಬೇಡಿಕೆ ಇದೆ. ಬೇಡಿಕೆ ಇರುವಾಗ ಅದನ್ನು ಪೂರೈಸುವುದು ಕೂಡ ಅಗತ್ಯ. ಹೀಗಾಗಿ ದೊಡ್ಡ ಬಡಾವಣೆಗಳನ್ನು ನಿರ್ಮಿಸಿ ಅಗತ್ಯ ಇರುವವರಿಗೆ ನಿವೇಶನಗಳನ್ನು ಒದಗಿಸಿ,' ಎಂದು ಸಚಿವ ಯತೀಂದ್ರ ತಿಳಿಸಿದರು. ಶಾಸಕ ಮಲ್ಲಿಕಾರ್ಜುನ್‌ ಮಧ್ಯ ಪ್ರವೇಶಿಸಿ, 'ಕುಂದುವಾಡ ಗ್ರಾಮದಲ್ಲಿ ಭೂಮಿ ಬೆಲೆ ಹೆಚ್ಚಾಗಿದೆ. ಎಕರೆಗೆ 1.25 ಕೋಟಿ ರೂ. ಕೊಡುವುದಾಗಿ ನಗರಾಭಿವೃದ್ಧಿ ಪ್ರಾಧಿಕಾರದವರು ಹೇಳುತ್ತಿದ್ದಾರೆ. ಆದರೆ, ರೈತರ ಬೇಡಿಕೆ ಮೂರು ಪಟ್ಟಿದೆ. ಜತೆಗೆ ಜೆ.ಎಚ್‌. ಪಟೇಲ್‌ ಬಡಾವಣೆ ನಂತರ ನಗರದಲ್ಲಿ ದೂಡಾದಿಂದ ಒಂದೇ ಒಂದು ಬಡಾವಣೆ ನಿರ್ಮಾಣವಾಗಿಲ್ಲ. ಪ್ರಾಧಿಕಾರದಿಂದ ಒಂದು ಬೃಹತ್‌ ಬಡಾವಣೆ ನಿರ್ಮಿಸುವ ಅಗತ್ಯವಿದೆ,' ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಶಾಸಕರಾದ ಬಿ.ಪಿ. ಹರೀಶ್‌, ಸಮರ್ಥ್‌ ಶಾಮನೂರು, ದೂಡಾ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ, ಮನಪಾ ಆಯುಕ್ತ ಡಾ.ಎನ್‌.ಮಹಾಂತೇಶ್‌, ಮಾಜಿ ಶಾಸಕ ಎಸ್‌.ರಾಮಪ್ಪ, ಕಾರ್ಯಪಾಲಕ ಎಂಜಿನಿಯರ್‌ ಉದಯ್‌ಕುಮಾರ್‌ ಇತರರಿದ್ದರು.


ಜನರಿಗೆ ತೊಂದರೆ ಆಗದಿರಲಿ

'ಈ ಬಾರಿ ಮಳೆ ಅಭಾವವಿದೆ. ಮುಂದೆ ಬರ ಘೋಷಣೆ ಕೂಡ ಆಗಬಹುದು. ಹೀಗಾಗಿ ಮುಂಬರುವ ಬರ ಪರಿಸ್ಥಿತಿ ಎದುರಿಸುವಲ್ಲಿ, ಸಾರ್ವಜನಿಕರಿಗೆ ನೀರು ಮತ್ತು ವಿದ್ಯುತ್‌ಗೆ ಸಮಸ್ಯೆ ಆಗದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಮುಂದಿನ ಎರಡು ತಿಂಗಳಿಗೆ ಮಾತ್ರವಲ್ಲ, ಮುಂದಿನ ಮಳೆಗಾಲದವರೆಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು, ಸಮಯಕ್ಕೆ ಸರಿಯಾಗಿ ಅವರ ಕೆಲಸಗಳನ್ನು ಮಾಡಿಕೊಡಬೇಕು. ಮುಖ್ಯವಾಗಿ ಇ-ಸ್ವತ್ತು ನೀಡಲು ಸಾರ್ವಜನಿಕರನ್ನು ಅಲೆದಾಡಿಸಬಾರದು,' ಎಂದು ಸಚಿವ ಡಾ.ಯತೀಂದ್ರ ಸೂಚನೆ ನೀಡಿದರು.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!