ಜಂತರ್ ಮಂತರ್‌ನಲ್ಲಿ ಆಹಾರ ನೀಡುತ್ತಿದ್ದ ಜುನೇದ್ ಮನೆ ಮೇಲೆ ಯುಪಿ ಪೊಲೀಸ್ ದಾಳಿ: CJP ಆಕ್ರೋಶ
ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಜನರಿಗೆ ಆಹಾರ ಮತ್ತು ಕುಡಿಯುವ ನೀರು ಪೂರೈಸುತ್ತಿದ್ದ ಸಾಮಾಜಿಕ ಸ್ವಯಂಸೇವಕ ಮೊಹಮ್ಮದ್ ಜುನೇದ್ ಅವರ ಕುಟುಂಬಸ್ಥರ ಮೇಲೆ ಉತ್ತರ ಪ್ರದೇಶ ಪೊಲೀಸರು ದಾಳಿ ನಡೆಸಿ, ಕಿರುಕುಳ ನೀಡುತ್ತಿದ್ದಾರೆ ಎಂದು ಕಾಕ್ರೋಜ್ ಜನತಾ ಪಾರ್ಟಿ ಗಂಭೀರ ಆರೋಪ ಮಾಡಿದೆ. ಅಪರಾಧಿಗಳನ್ನ ಬಂಧಿಸುವ ಬದಲು, ಸಮಾಜಸೇವೆ ಮಾಡುತ್ತಿರುವ ಸ್ವಯಂಸೇವಕರನ್ನ ಹಾಗೂ ಅವರ ಕುಟುಂಬದವರ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್) ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಸಿಜೆಪಿ, 'ಉತ್ತರ ಪ್ರದೇಶ ಪೊಲೀಸರು ಕ್ರಿಮಿನಲ್‌ಗಳನ್ನ ಹಿಡಿಯುವ ಬದಲು, ಜಂತರ್ ಮಂತರ್‌ನಲ್ಲಿ ಜನರಿಗೆ ಉಚಿತವಾಗಿ ಆಹಾರ ಮತ್ತು ನೀರು ವಿತರಿಸುತ್ತಿದ್ದ ನಮ್ಮ ಸ್ವಯಂಸೇವಕ ಮೊಹಮ್ಮದ್ ಜುನೇದ್ ಅವರ ಹಿಂದೆ ಬಿದ್ದು ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಜುನೇದ್ ಅವರ ಕುಟುಂಬಕ್ಕೆ ಪೊಲೀಸರು ತೀವ್ರ ಕಿರುಕುಳ ನೀಡುತ್ತಿದ್ದು, ಈ ಸಮಯದಲ್ಲಿ ನಾವು ಅವರ ಜೊತೆಗೆ ನಿಲ್ಲುತ್ತೇವೆ' ಎಂದು ಸ್ಪಷ್ಟಪಡಿಸಿದೆ.
ಮಾಹಿತಿಗಳ ಪ್ರಕಾರ, ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಧರಣಿ ಹಾಗೂ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಜನರಿಗೆ ಮೊಹಮ್ಮದ್ ಜುನೇದ್ ಪ್ರತಿ ದಿನ ಉಚಿತ ಆಹಾರ ಮತ್ತು ನೀರು ಪೂರೈಸುವ ಕೆಲಸ ಮಾಡುತ್ತಿದ್ದರು. ಆದರೆ, ಈ ಕೆಲಸವನ್ನ ಸಹಿಸದ ಉತ್ತರ ಪ್ರದೇಶ ಪೊಲೀಸರು, ಜುನೇದ್ ಅವರ ಸ್ವಗ್ರಾಮದಲ್ಲಿರುವ ಮನೆಗೆ ದಿಢೀರ್ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಜುನೇದ್ ಅವರ ತಂದೆ ಹಾಗೂ ಅಪ್ರಾಪ್ತ ವಯಸ್ಕ ಸಹೋದರನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಯಾವುದೇ ಅಪರಾಧ ಹಿನ್ನೆಲೆಯಿಲ್ಲದಿದ್ದರೂ, ಕೇವಲ ಶಾಂತಿಯುತವಾಗಿ ಆಹಾರ ಧಾನ್ಯ ವಿತರಿಸಿದ ವ್ಯಕ್ತಿಯ ತಂದೆ ಮತ್ತು ಸಣ್ಣ ವಯಸ್ಸಿನ ಸಹೋದರನನ್ನು ವಶಕ್ಕೆ ಪಡೆದಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಹಲವು ಹಕ್ಕುಗಳ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
ದಾಳಿಯ ತೀವ್ರತೆ ಕೇವಲ ಜುನೇದ್ ಅವರ ಮನೆಗಷ್ಟೇ ಸೀಮಿತವಾಗಿಲ್ಲ. ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಜುನೇದ್ ಅವರ ಸಹೋದರಿಯ ಮಾವ ಹಾಗೂ ಮೈದುನನನ್ನು (ಗಂಡನ ಸಹೋದರ) ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಜುನೇದ್ ಅವರ ಇಡೀ ಕುಟುಂಬ ಹಾಗೂ ದೂರದ ಸಂಬಂಧಿಕರನ್ನ ಭಯದ ವಾತಾವರಣದಲ್ಲಿಡುವ ಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರ ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧದ ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಗಳನ್ನ ಹತ್ತಿಕ್ಕಲು ಇಂತಹ ಮಾರ್ಗಗಳನ್ನ ಅನುಸರಿಸಲಾಗುತ್ತಿದೆ ಎಂದು ಸಿಜೆಪಿ ಆರೋಪಿಸಿದೆ. 'ಸರ್ಕಾರವು ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಗೆ ಮತ್ತು ಭಿನ್ನಾಭಿಪ್ರಾಯಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಈಗ ಯಾರಿಗೂ ಆಶ್ಚರ್ಯ ತರುವುದಿಲ್ಲ. ಆದರೆ, ಇಂತಹ ಹೇಡಿಗಳ ಬೆದರಿಕೆ ತಂತ್ರಗಳಿಗೆ ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ' ಎಂದು CJP ಖಡಕ್ಕಾಗಿ ಹೇಳಿದೆ.
ನ್ಯಾಯಾಲಯದಲ್ಲಿ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಸಿಜೆಪಿ
ಪ್ರಸ್ತುತ ತಮ್ಮ ತಂಡವು ಸ್ವಯಂಸೇವಕ ಮೊಹಮ್ಮದ್ ಜುನೇದ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಸಿಜೆಪಿ ತಿಳಿಸಿದೆ. ಯಾವುದೇ ಕಾರಣಕ್ಕೂ ಜುನೇದ್ ಅಥವಾ ಅವರ ಕುಟುಂಬವನ್ನ ಬಲಿಪಶು ಮಾಡಲು ಬಿಡುವುದಿಲ್ಲ ಎಂದು ಆಶ್ವಾಸನೆ ನೀಡಿದೆ. ಪೊಲೀಸರ ಪ್ರತಿಯೊಂದು ಕಾನೂನುಬಾಹಿರ ಕ್ರಮಗಳ ವಿರುದ್ಧ ಶೀಘ್ರವೇ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಹಾಗೂ ಕಾನೂನು ರೀತಿಯಲ್ಲೇ ಸೂಕ್ತ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದೆ.

Comments
Post a Comment