ಹಿಂದೂ ಧರ್ಮ ಸಮಾಜ ವಿಭಜಿಸುವ ಶಕ್ತಿಯಲ್ಲ, ಇಡೀ ಜಗತ್ತನ್ನು ಒಂದುಗೂಡಿಸುವ ತತ್ವ : ಮೋಹನ್ ಭಗವತ್


 ಭಾರತದಲ್ಲಿ ಮುಸ್ಲಿಮರೇ ಇರಬಾರದು ಎಂದು ಭಾವಿಸುವವರು ಹಿಂದೂವಲ್ಲ' ಎಂದು ಆರ್‌ಎಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.ಆರ್‌ಎಸ್‌ಎಸ್‌ ಶತಮಾನೋತ್ಸವದ ಜಾಗತಿಕ ಸಂಪರ್ಕ ಕಾರ್ಯಕ್ರಮದ ಹಿನ್ನೆಲೆ ಮೋಹನ್ ಭಾಗವತ್ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಮಾತನಾಡಿರುವ ಅವರು, ' ಭಾರತದಲ್ಲಿ ವಾಸಿಸುವ ಹಕ್ಕು ಎಲ್ಲ ಸಮುದಾಯದವರಿಗೂ ಇದೆ. ಪ್ರಪಂಚದ ಬೇರೆಲ್ಲೂ ಆಶ್ರಯ ಸಿಗದವರು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಜಗತ್ತಿನ ಎಲ್ಲರೂ ಒಂದೇ ಎಂಬ ಭಾವ ನಮಗಿದೆ. ಇಲ್ಲಿನ ವೈವಿದ್ಯತೆಯನ್ನು ಜಗತ್ತಿಗೆ ತಿಳಿಸುವುದೇ ನಮ್ಮ ಕರ್ತವ್ಯ' ಎಂದಿದ್ದಾರೆ.

ಟೊರೊಂಟೊ, ಆ.31- ಹಿಂದೂ ಧರ್ಮವು ಸಮಾಜವನ್ನು ವಿಭಜಿಸುವ ಶಕ್ತಿಯಲ್ಲ; ಬದಲಾಗಿ ಇಡೀ ಜಗತ್ತನ್ನು ಒಂದುಗೂಡಿಸುವ ತತ್ವವನ್ನು ಹೊಂದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದರು.

ಕೆನಡಾದ ಟೊರೊಂಟೊದಲ್ಲಿ ಕೆನಡಿಯನ್‌ ಹಿಂದೂಸ್‌ ಫಾರ್‌ ಔಟ್‌ರೀಚ್‌, ರಿಲೇಶನ್ಸ್‌ ಅಂಡ್‌ ಡೈಲಾಗ್‌ ಸಂಸ್ಥೆ ಆಯೋಜಿಸಿದ್ದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ಇತರರಿಗೆ ನೆರವಾಗುವುದು ಮತ್ತು ಇಡೀ ಜಗತ್ತನ್ನು ಒಂದು ಕುಟುಂಬವೆಂದು ಪರಿಗಣಿಸುವ ಮನೋಭಾವ ಅಂತರ್ಗತವಾಗಿದೆ ಎಂದರು.

‘ಹಿಂದೂ’ ಎಂಬ ಪದವನ್ನು ನಿರ್ದಿಷ್ಟ ಭಾಷೆ, ಪೂಜಾ ಪದ್ಧತಿ ಅಥವಾ ಜೀವನಶೈತಿಗೆ ಮಾತ್ರ ಸೀಮಿತಗೊಳಿಸಲಾಗದು. ಹಿಂದೂ ತತ್ವಜ್ಞಾನವು ವೈವಿಧ್ಯತೆಯನ್ನು ಗೌರವಿಸುವುದರ ಜತೆಗೆ ಅದನ್ನು ಸ್ವೀಕರಿಸುತ್ತದೆ. ಸಮಾಜದಲ್ಲಿ ನೂರಾರು ಭಾಷೆಗಳು, ಜಾತಿಗಳು ಮತ್ತು ಧರ್ಮಗಳು ಇರುವುದು ಸಹಜ. ಆದರೆ ಈ ಎಲ್ಲ ವೈವಿಧ್ಯತೆಗಳ ಹಿಂದಿರುವ ಆಂತರಿಕ ಏಕತೆಯೇ ಅಂತಿಮ ಸತ್ಯ ಎಂದು ಅವರು ವಿಶ್ಲೇಷಿಸಿದರು.

ಭಾರತೀಯ ಪೂರ್ವಜರು ಮೆಕ್ಸಿಕೋದಿಂದ ಸೈಬೀರಿಯಾ ಹಾಗೂ ಹಿಮಾಲಯದಿಂದ ಆಗ್ನೇಯ ಏಷ್ಯಾದವರೆಗೆ ಸಂಚರಿಸಿದ್ದರೂ ಯಾವುದೇ ಭೂಪ್ರದೇಶವನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಬದಲಾಗಿ ಆಯುರ್ವೇದ, ಖಗೋಳಶಾಸ್ತ್ರ ಸೇರಿದಂತೆ ಜ್ಞಾನ ಮತ್ತು ನಾಗರಿಕತೆಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದರು ಎಂದು ಭಾಗವತ್‌ ಹೇಳಿದರು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪೋಲಿಷ್‌ ನಿರಾಶ್ರಿತರಿಗೆ ಜಾಮ್‌ನಗರದ ಮಹಾರಾಜರು ಆಶ್ರಯ ನೀಡಿದ್ದನ್ನು ಸ್ಮರಿಸಿದ ಅವರು, ಪಾರ್ಸಿಗಳು, ಯಹೂದಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಭಾರತ ಸದಾ ಸುರಕ್ಷಿತ ನೆಲೆಯಾಗಿತ್ತು ಎಂದು ಹೇಳಿದರು.

ವಿಶ್ವದ ಯಾವುದೇ ಭಾಗದಲ್ಲಿ ಬಿಕ್ಕಟ್ಟು ಎದುರಾದಾಗ ಭಾರತ ನೆರವಿನ ಹಸ್ತ ಚಾಚುತ್ತಿದೆ. ಇತ್ತೀಚಿನ ಯುದ್ಧಪೀಡಿತ ಪ್ರದೇಶಗಳಿಂದ ಭಾರತೀಯರ ಜತೆಗೆ ಹಲವು ವಿದೇಶಿ ಪ್ರಜೆಗಳನ್ನೂ ರಕ್ಷಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಮುಕ್ತ ಮನಸ್ಸಿನ ಸಮಾಜ ನಿರ್ಮಾಣಕ್ಕೆ ‘ವಸುಧೈವ ಕುಟುಂಬಕಂ’ ಪರಿಕಲ್ಪನೆ ಅತ್ಯಂತ ಅಗತ್ಯ. ಹಿಂದೂಗಳು ಜಾಗೃತರಾದರೆ ಇಡೀ ಜಗತ್ತೇ ಜಾಗೃತಗೊಳ್ಳಲಿದೆ ಎಂದು ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟರು.

ಸಮಾವೇಶದಲ್ಲಿ ಕೆನಡಾದ ಎಂಟು ಪ್ರಾಂತ್ಯಗಳಿಂದ 2,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಕೆನಡಾದ ಮಾಜಿ ರಕ್ಷಣಾ ಸಚಿವ ಹಾಗೂ ಆಲ್ಬರ್ಟಾದ ಮಾಜಿ ಪ್ರೀಮಿಯರ್‌ ಜೇಸನ್‌ ಕೆನ್ನಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಗಣ್ಯರು ಉಪಸ್ಥಿತರಿದ್ದರು.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!