ಸೈಬರ್ ವಂಚನೆ ವಿರುದ್ಧ ಆಪರೇಷನ್ ಆಕ್ಟೋಪಸ್ – 32 ಬ್ಯಾಂಕ್ ಉದ್ಯೋಗಿಗಳು ಸೇರಿ 52 ಮಂದಿ ಅರೆಸ್ಟ್‌


 ಹೈದರಾಬಾದ್: ಆಪರೇಷನ್ ಆಕ್ಟೋಪಸ್ 2.0  ಹೆಸರಿನಲ್ಲಿ ಹೈದರಾಬಾದ್ ಪೊಲೀಸರು  ಕಾರ್ಯಾಚರಣೆ ನಡೆಸಿ ಬೃಹತ್ ಸೈಬರ್‌ ವಂಚನೆಯ  ಜಾಲವೊಂದನ್ನು ಬಯಲಿಗೆಳೆದಿದ್ದಾರೆ. ಒಂಬತ್ತು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ 32 ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ 52 ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಹಣವನ್ನು ವರ್ಗಾಯಿಸಲು ಸೈಬರ್ ಅಪರಾಧಿಗಳಿಗೆ ನಕಲಿ (ಮ್ಯೂಲ್) ಖಾತೆಗಳನ್ನು ತೆರೆಯಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತಿದ್ದ ಬ್ಯಾಂಕ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತರಲ್ಲಿ ಬ್ಯಾಂಕ್ ಆಫ್ ಬರೋಡಾ, ಬಂಧನ್ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್‌ ಸೇರಿದಂತೆ ಹಲವು ಬ್ಯಾಂಕುಗಳ ವ್ಯವಸ್ಥಾಪಕರು, ಗುಮಾಸ್ತರು ಮತ್ತು ಕೆವೈಸಿ ಸಿಬ್ಬಂದಿ ಸೇರಿದ್ದಾರೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ತೆಲಂಗಾಣ ಮತ್ತು ಇತರ ರಾಜ್ಯಗಳಲ್ಲಿ ಹಲವಾರು ಪೊಲೀಸ್ ತಂಡಗಳು ಒಂದು ವಾರ ಈ ಕಾರ್ಯಾಚರಣೆ ನಡೆಸಿವೆ.

ದಾಳಿಯ ಸಮಯದಲ್ಲಿ, ಪೊಲೀಸರು 26 ಮೊಬೈಲ್ ಫೋನ್‌ಗಳು, 14 ಚೆಕ್ ಪುಸ್ತಕಗಳು, 21 ನಕಲಿ ಕಂಪನಿಯ ಪತ್ರಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಖಾತೆಗಳನ್ನು ರಚಿಸಲು ಮತ್ತು ನಿರ್ವಹಿಸಲು ಈ ದಾಖಲೆಗಳನ್ನು ಬಳಸಲಾಗಿದೆ. ಇಂತಹ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಯಾರಾದರೂ ಸರಿ, ಅವರ ಸ್ಥಾನ ಏನೇ ಇದ್ದರೂ ಸಹ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ನೂರಾರು ನಕಲಿ ಖಾತೆಗಳನ್ನು ತೆರೆದಿದ್ದ ಆರೋಪಿಗಳನ್ನು ಆಪರೇಷನ್ ಆಕ್ಟೋಪಸ್ 1.0 ರಲ್ಲಿ ಪೊಲೀಸರು ಬಂಧಿಸಿದ್ದರು. ನಾಗರಿಕರು ಒಟಿಪಿಗಳು ಅಥವಾ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಇತರರಿಗೆ ಬ್ಯಾಂಕ್ ಖಾತೆಯ ವಿವರವನ್ನು ನೀಡಬಾರದು ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ

ವರದಿ: ಟಿವಿ ನ್ಯೂಸ್ ಕನ್ನಡ ಏಷ್ಯನ್ ನೆಟ್‌ವರ್ಕ್.

Comments

Popular posts from this blog

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ಕೊಟ್ಟೂರು ತಾಲ್ಲೂಕಿನ ಕೋಗಲಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!