ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಡಿ. ಸುಧಾಕರ್ ಇನ್ನಿಲ್ಲ: ನಾಳೆ ಕರ್ಮಭೂಮಿ ಚಳ್ಳಕೆರೆಯಲ್ಲಿ ಅಂತ್ಯಕ್ರಿಯೆ
ಬೆಂಗಳೂರು: ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ. ಸುಧಾಕರ್ ಅವರು ಭಾನುವಾರ ನಸುಕಿನ ಜಾವ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಡಿಯಲ್ಲಿರುವ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಮೃತ ಸಚಿವ ಡಿ. ಸುಧಾಕರ್ ಅವರು ಪತ್ನಿ ಹರ್ಷಿಣಿ, ಮಗ ಸುಹಾಸ್ ಹಾಗೂ ಪುತ್ರಿ ಸ್ಫೂರ್ತಿ ಸೇರಿದಂತೆ ಅಪಾರ ಸಂಖ್ಯೆಯ ಬಂಧುಮಿತ್ರರರು ಹಾಗೂ ಪಕ್ಷದ ಕಾರ್ಯಕರ್ತರನ್ನು ಅಗಲಿದ್ದಾರೆ.
ಸಚಿವರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ವಿವಿಧ ಕಡೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯವರೆಗೆ ಹಿರಿಯೂರಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಚಳ್ಳಕೆರೆಯ ಸ್ವಗೃಹದಲ್ಲಿ ಪೂಜೆ ಹಾಗೂ ವಿಧಿ-ವಿಧಾನಗಳು ನೆರವೇರಲಿವೆ.
ಚಳ್ಳಕೆರೆಯ ಡಿ. ಸುಧಾಕರ್ ಕ್ರೀಡಾಂಗಣದಲ್ಲಿಯೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಚಿವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 3ರಿಂದ 4 ಗಂಟೆಯೊಳಗೆ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
66 ವರ್ಷದ ಸುಧಾಕರ್ ಅವರಿಗೆ ತಿಂಗಳಿನಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ 3:15ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಪ್ರಕಟಿಸಿವೆ.
ಮೊಣಕಾಲು ಸಂಬಂಧ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಚಿವ ಡಿ. ಸುಧಾಕರ್ ಅವರು ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಅವರಿಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಮಣಿಪಾಲ್ ಆಸ್ಪತ್ರೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿಯೇ ಸುಧಾಕರ್ ನೀಡಲಾಗುತ್ತಿತ್ತು.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮೂಲದ ಡಿ. ಸುಧಾಕರ್ ಅವರು, 1961 ಮಾರ್ಚ್28ರಂದು ಎನ್. ದಶರಥಯ್ಯ ಮತ್ತು ಕಾಂಚನಮಾಲಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಹಾಗೂ, ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರ್ಣಗೊಳಿಸಿದರು.
ವೃತ್ತಿಜೀವನದಲ್ಲಿ ತಂದೆಯಿಂದ ಬಳುವಳಿಯಾಗಿ ಬಂದಿದ್ದ ಕೃಷಿ ಮತ್ತು ಲಿಕ್ಕರ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು, ನಂತರ ರಾಜಕೀಯದತ್ತ ಆಕರ್ಷಿತರಾದರು. ಮಾಜಿ ಶಾಸಕ ಎನ್. ಜಯಣ್ಣ ಅವರಿಂದ ರಾಜಕೀಯ ಪಟ್ಟುಗಳನ್ನು ಕಲಿತ ಸುಧಾಕರ್, ಹಂತ-ಹಂತವಾಗಿ ಬೆಳೆದು ಚಿತ್ರದುರ್ಗ ಜಿಲ್ಲೆಯ ಪ್ರಭಾವಿ ನಾಯಕರಾಗಿ ಇದೀಗ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗುರುತಿಸಿಕೊಂಡಿದ್ದರು.

Comments
Post a Comment