ಕಾಮಗಾರಿ ನಡೆಸದೇ ಐದು ಕೋಟಿ ರೂಪಾಯಿ ಗುಳುಂ!: ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಬಯಲು


 Lokayukta Case-ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) 100 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಗರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಕಾಮಗಾರಿ ನಡೆಸದೆಯೇ ನಕಲಿ ದಾಖಲೆ ಸೃಷ್ಟಿಸಿ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣದಲ್ಲಿ ಅಬ್ದುಲ್ ರಹೀಮ್ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಪರಿಗಣಿಸಲಾಗಿದ್ದು, ಅಕ್ರಮದಲ್ಲಿ ಭಾಗಿಯಾದ ಗುತ್ತಿಗೆದಾರರಿಗೂ ನೋಟಿಸ್ ನೀಡಲಾಗಿದೆ. ಕಮಿಷನ್ ವ್ಯವಹಾರದ ಶಂಕೆಯಿದ್ದು, ತನಿಖೆ ಚುರುಕಾಗುತ್ತಿದ್ದಂತೆ ಗುತ್ತಿಗೆದಾರ ವೈ.ಜಿ. ನಾಗರಾಜು ನ್ಯಾಯಾಲಯದಿಂದ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಬೆಂಗಳೂರು: ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ(ಕೆಆರ್‌ಐಡಿಎಲ್‌) ಕೆಲ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಲೂಟಿ ಮಾಡಿದ ಕೋಟ್ಯಾಂತರ ಹಗರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಬೆನ್ನಲ್ಲೇ ನಾಲ್ವರು ಎಂಜಿನಿಯರ್‌ಗಳು ನಕಲಿ ದಾಖಲೆ ಪಡೆದು ಐದು ಕೋಟಿ ರೂ.ಅನುದಾನ ಬಿಡುಗಡೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.

ಬೆಂಗಳೂರು ಉತ್ತರ ತಾಲೂಕು ಹಾಗೂ ಮಂಡ್ಯದ ಕೆಲ ಗ್ರಾಮಗಳಲ್ಲಿ ಕಾಮಗಾರಿಯನ್ನೇ ನಡೆಸದೆ ಅನುದಾನ ಬಿಡುಗಡೆ ಮಾಡಿದ್ದ ಅಕ್ರಮದಲ್ಲಿ ನಾಲ್ವರು ಅಧಿಕಾರಿಗಳನ್ನು ಆರೋಪಿಗಳನ್ನಾಗಿ ತನಿಖಾ ತಂಡ ಪರಿಗಣಿಸಿದೆ. ಕೆಆರ್‌ಐಡಿಎಲ್‌ ಹಿಂದಿನ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಅಬ್ದುಲ್‌ ರಹೀಮ್‌, ಅಸಿಸ್ಟೆಂಟ್‌ ಎಂಜಿನಿಯರ್‌ಗಳಾದ ಡಿ.ಟಿ. ಸುರೇಶ್‌ ರೆಡ್ಡಿ, ಟಿ.ಪಿ. ಪ್ರಕಾಶ್‌, ಪಿ.ಕೆ ಪ್ರಕಾಶ್‌ ಹಗರಣದಲ್ಲಿ ಪಾಲುದಾರರಾಗಿದ್ದಾರೆ.

ಮತ್ತೊಂದೆಡೆ ಕೆಆರ್‌ಐಡಿಎಲ್‌ ಅಧಿಕಾರಿಗಳ ಜತೆ ಶಾಮೀಲಾಗಿ ನಕಲಿ ಬಿಲ್‌ ಸಲ್ಲಿಸಿ ಹಣ ಪಡೆದಿದ್ದ ಗುತ್ತಿಗೆದಾರರ ಪಟ್ಟಿಯನ್ನು ಸಿದ್ಧಪಡಿಸಿರುವ ತನಿಖಾ ತಂಡ ವಿಚಾರಣೆಗೆ ಹಾಜರಾಗುವಂತೆ ಹಲವರಿಗೆ ನೋಟಿಸ್‌ ನೀಡಿದೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ, ಆಲೂರು, ಕಿತ್ತನಹಳ್ಳಿ ಹಾಗೂ ಮಂಡ್ಯದ ಕೆಲ ಗ್ರಾಮಗಳಲ್ಲಿ ಸಿಮೆಂಟ್‌ ರಸ್ತೆ, ಒಳಚರಂಡಿ ವ್ಯವಸ್ಥೆ ಕಾಮಗಾರಿ ನಡೆಸದೆ ನಕಲಿ ದಾಖಲೆ ಸೃಷ್ಟಿಸಲಾಗಿತ್ತು. ಕಾಮಗಾರಿ ನಡೆದಿದೆ ಎಂದು ಕೆಆರ್‌ಐಡಿಎಲ್‌ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದರು. ಬಳಿಕ ಕೆಲವು ಆಯ್ದ ಗುತ್ತಿಗೆದಾರರಿಗೆ ಐದು ಕೋಟಿ ರೂ.ಅನುದಾನ ಬಿಡುಗಡೆ ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದರು ಎಂದು ತನಿಖಾ ಮೂಲಗಳು ತಿಳಿಸಿವೆ.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ