ಶಾಲೆ ಫೀಸ್‌ ಕಟ್ಟಿ ಓದಿಸಿದ್ದ ಶಿಕ್ಷಕನಿಗೆ ಹೊಸ ಕಾರು ಗಿಫ್ಟ್‌ ಕೊಟ್ಟ ಶಿಷ್ಯ! ಮೂಕವಿಸ್ಮಿತನಾದೆ ಎಂದ ವಸ್ತ್ರದ್ ಸರ್‌


 ಹಾವೇರಿ ಜಿಲ್ಲೆಯ ಹಾನಗಲ್‌ನ ಕುಮಾರೇಶ್ವರ ಹೈಸ್ಕೂಲ್‌ನ ನಿವೃತ್ತ ಶಿಕ್ಷಕ ಸಿ.ಎಸ್. ವಸ್ತ್ರದ್ ಅವರಿಗೆ ಹಳೆಯ ವಿದ್ಯಾರ್ಥಿ ನವೀನ್ ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು ಬಡತನದಲ್ಲಿದ್ದ ನವೀನ್‌ಗೆ ವಸ್ತ್ರದ್ ಸರ್ ತಂದೆಯಂತೆ ಆಸರೆಯಾಗಿ ಶಿಕ್ಷಣ ಕೊಡಿಸಿದ್ದರು. ಇದೀಗ ಉನ್ನತ ಹುದ್ದೆಯಲ್ಲಿರುವ ನವೀನ್, ಗುರುವಿನ ಬೀಳ್ಕೊಡುಗೆ ಸಮಾರಂಭದಲ್ಲಿ ಕಾರು ನೀಡುವ ಮೂಲಕ ಭಾವನಾತ್ಮಕವಾಗಿ ಋಣ ಸಂದಾಯ ಮಾಡಿ ಆದರ್ಶ ಮೆರೆದಿದ್ದಾರೆ

ಹಾವೇರಿ (ಹಾನಗಲ್): ಶಿಕ್ಷಕ ವೃತ್ತಿ ಕೇವಲ ನಾಲ್ಕು ಗೋಡೆಗಳ ನಡುವೆ ಪಾಠ ಹೇಳುವುದಕ್ಕಷ್ಟೇ ಸೀಮಿತವಲ್ಲ. ಅದು ನಿಸ್ವಾರ್ಥತೆಯಿಂದ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ತಪಸ್ಸು. ಹಾವೇರಿ ಜಿಲ್ಲೆಯ ಹಾನಗಲ್‌ನ ಕುಮಾರೇಶ್ವರ ಹೈಸ್ಕೂಲ್‌ನ ನಿವೃತ್ತ ಶಿಕ್ಷಕ ಸಿ.ಎಸ್. ವಸ್ತ್ರದ್ ಅವರ ಬೀಳ್ಕೊಡುಗೆ ಸಮಾರಂಭ ಈ ಮಾತಿಗೆ ಜೀವಂತ ಸಾಕ್ಷಿಯಾಯಿತು.

ಕಣ್ಣೀರು ತರಿಸುವ ಹಿನ್ನೆಲೆ

2007ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿ ನವೀನ್ ಹುಲಿಹಳ್ಳಿ ಅವರು ತಮ್ಮ ಗುರುವಿಗೆ ಕೃತಜ್ಞತೆಯ ಕಾಣಿಕೆಯಾಗಿ 'ಮಾರುತಿ ಸುಜುಕಿ ಸ್ವಿಫ್ಟ್' ಕಾರನ್ನು ಉಡುಗೊರೆಯಾಗಿ ನೀಡಿದರು. ಈ ಉಡುಗೊರೆಯ ಹಿಂದಿರುವ ಕಥೆ ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ.

ಸದ್ಯ ಬೆಂಗಳೂರಿನ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ನವೀನ್, ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಬಡತನದ ಬೇಗೆಯಲ್ಲಿ ಬೆಂದವರು. ಆರ್ಥಿಕ ಮುಗ್ಗಟ್ಟಿನಿಂದಾಗಿ ಶಿಕ್ಷಣವನ್ನೇ ಮೊಟಕುಗೊಳಿಸುವ ಹಂತಕ್ಕೆ ತಲುಪಿದ್ದ ಆ ಎಳೆಯ ಜೀವಕ್ಕೆ ಅಂದು ಆಸರೆಯಾಗಿದ್ದು ಇದೇ ವಸ್ತ್ರದ್ ಸರ್. ನವೀನ್ ಅವರ ಶಾಲಾ ಶುಲ್ಕ ಕಟ್ಟಿದ್ದಲ್ಲದೆ, ರಜಾ ದಿನಗಳಲ್ಲೂ ಅವರಿಗಾಗಿ ವಿಶೇಷ ತರಗತಿಗಳನ್ನು ತೆಗೆದುಕೊಂಡು, ಸ್ನಾತಕೋತ್ತರ ಪದವಿ ಮುಗಿಯುವವರೆಗೂ ಓರ್ವ ತಂದೆಯಂತೆ ಬೆನ್ನೆಲುಬಾಗಿ ನಿಂತಿದ್ದರು. ಆ ನಿಸ್ವಾರ್ಥ ಪ್ರೀತಿಗೆ ಇಂದು ನವೀನ್ ತಮ್ಮದೇ ರೀತಿಯಲ್ಲಿ ಋಣ ಸಂದಾಯ ಮಾಡಿದ್ದಾರೆ.

ತಂದೆಯ ಸ್ಥಾನ ತುಂಬಿದ ಗುರು

ವೇದಿಕೆಯಲ್ಲಿ ಭಾವುಕರಾಗಿ ಮಾತನಾಡಿದ ನವೀನ್, "ವಸ್ತ್ರದ್ ಸರ್ ನಮಗೆ ಕೇವಲ ಪಠ್ಯಪುಸ್ತಕದ ಪಾಠ ಮಾಡಲಿಲ್ಲ, ಜೀವನದ ಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿದರು. ನನ್ನ ಸ್ನಾತಕೋತ್ತರ ಪದವಿ ಮುಗಿಯುವವರೆಗೂ ಅವರು ಕೇವಲ ಶಿಕ್ಷಕರಾಗಿರದೆ, ನನ್ನ ಪಾಲಿನ ತಂದೆಯಾಗಿದ್ದರು. ಶೂನ್ಯದಿಂದ ಬಂದ ನನ್ನ ಜೀವನವನ್ನು ಬದಲಾಯಿಸಿದ ಅವರ ಮಾರ್ಗದರ್ಶನಕ್ಕೆ ನನ್ನ ಕೃತಜ್ಞತೆ ಏನೆಂದು ತೋರಿಸಲು ನಾನು ಬಯಸಿದ್ದೆ. ಈ ಕಾರು ಆ ಜೀವಮಾನದ ಕೃತಜ್ಞತೆಯ ಒಂದು ಸಣ್ಣ ಸಂಕೇತವಷ್ಟೇ," ಎಂದು ಗದ್ಗದಿತರಾದರು.

ಮೂಕವಿಸ್ಮಿತನಾದೆ ಎಂದ ಶಿಕ್ಷಕ

ಹಾನಗಲ್ ಕುಮಾರೇಶ್ವರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ, ರಿಬ್ಬನ್ ಕಟ್ಟಿದ ಹೊಸ ಕಾರನ್ನು ವೇದಿಕೆ ಬಳಿ ತಂದು ಕೀ ಹಸ್ತಾಂತರಿಸಿದಾಗ ವಸ್ತ್ರದ್ ಅವರ ಕಣ್ಣಂಚು ಒದ್ದೆಯಾಗಿತ್ತು. "ನಾನು ಕೇವಲ ನನ್ನ ಕರ್ತವ್ಯ ಮಾಡಿದ್ದೇನೆ. ಇಂದು ನನ್ನ ಸಾವಿರಾರು ವಿದ್ಯಾರ್ಥಿಗಳನ್ನು ಒಟ್ಟಿಗೆ ನೋಡುತ್ತಿರುವುದು ಮತ್ತು ಶ್ರೀಗಳ ಆಶೀರ್ವಾದ ಪಡೆಯುತ್ತಿರುವುದೇ ನನಗೆ ಸಿಕ್ಕ ಅತಿ ದೊಡ್ಡ ಪ್ರಶಸ್ತಿ. ನವೀನ್‌ನ ಈ ಪ್ರೀತಿ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ. ನನ್ನ ಹಳೆಯ ವಿದ್ಯಾರ್ಥಿಗಳನ್ನು ಮತ್ತೆ ನೋಡಿ ತರಗತಿಯ ಹಳೆಯ ನೆನಪುಗಳು ಮರುಕಳಿಸಿದವು. ನನ್ನ ವಿದ್ಯಾರ್ಥಿಗಳು ಎಂದಿಗೂ ಶಿಸ್ತು ಮತ್ತು ವಿಧೇಯತೆಗೆ ಹೆಸರಾದವರು," ಎಂದು ವಸ್ತ್ರದ್ ಸರ್ ಭಾವುಕ ನುಡಿಗಳನ್ನಾಡಿದರು. ಹಳೆಯ ನೆನಪುಗಳು, ಭಾವುಕ ಕ್ಷಣಗಳು ಹಾಗೂ ಕೃತಜ್ಞತಾ ಭಾವದಿಂದ ತುಂಬಿದ್ದ ಈ ಬೀಳ್ಕೊಡುಗೆ ಸಮಾರಂಭ, ಪ್ರಾಚೀನ ಕಾಲದ 'ಗುರು-ಶಿಷ್ಯ' ಪರಂಪರೆ ಇಂದಿಗೂ ಜೀವಂತವಾಗಿದೆ ಎಂಬುದನ್ನು ಇಡೀ ಸಮಾಜಕ್ಕೆ ಸಾರಿದರು 

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ