ಬೆಂಗಳೂರಿನಲ್ಲಿ ಕೇವಲ 200 ರೂ.ಗಾಗಿ ಮಂಗಳಮುಖಿಯ ಭೀಕರ ಕೊಲೆ; ಆರೋಪಿ ಬಂಧನ


 ಬೆಂಗಳೂರು: ಕೇವಲ 200 ರೂಪಾಯಿಗಾಗಿ ಮಂಗಳಮುಖಿಯನ್ನು ಬರ್ಬರವಾಗಿ ಇರಿದು ಹತ್ಯೆ  ಮಾಡಿರುವ ಘಟನೆ ಶುಕ್ರವಾರ ರಾತ್ರಿ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಮೃತರನ್ನು ದೇವಿ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಗೌತಮ್ (29) ಎಂಬಾತನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಮೃತ ದೇವಿ ಅವರು ತಡರಾತ್ರಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಹೊರಭಾಗದಲ್ಲಿ ನಿಂತಿದ್ದಾಗ ಈ ದುರಂತ ಸಂಭವಿಸಿದೆ. ರಾಮಮೂರ್ತಿ ನಗರದ ನಿವಾಸಿಯಾದ ಗೌತಮ್ (29) ಎಂಬಾತ ಡಿಯೋ ಸ್ಕೂಟರ್‌ನಲ್ಲಿ ಮೆಜೆಸ್ಟಿಕ್ ಬಳಿ ಬಂದಿದ್ದ. ಮದ್ಯಪಾನ ಮಾಡಿದ್ದ ಆರೋಪಿ ಗೌತಮ್, ರಾತ್ರಿ ವೇಳೆಯಲ್ಲಿ ಜನರ ಬಳಿ ದರೋಡೆ ಮಾಡುವ ಉದ್ದೇಶದಿಂದಲೇ ಅಲ್ಲಿಗೆ ಬಂದಿದ್ದ. ಸ್ಥಳದಲ್ಲಿದ್ದ ದೇವಿಯ ಬಳಿ ಬಂದ ಆರೋಪಿ ಗೌತಮ್ 200 ರೂಪಾಯಿ ಹಣ ನೀಡುವಂತೆ ಪಟ್ಟುಹಿಡಿದಿದ್ದ. ಆದರೆ, ದೇವಿ ಹಣ ನೀಡಲು ನಿರಾಕರಿಸಿದಾಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.

ಈ ವೇಳೆ, ಆಕ್ರೋಶಗೊಂಡ ಆರೋಪಿ ತನ್ನ ಬಳಿಯಿದ್ದ ಡ್ರ್ಯಾಗರ್‌ನಿಂದ ಮೊದಲಿಗೆ ದೇವಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಬಳಿಕ ಅವರಿಂದ ಬ್ಯಾಗ್ ಮತ್ತು ಮೊಬೈಲ್ ಫೋನ್ ಕಸಿದುಕೊಂಡಿದ್ದಾನೆ. ದೇವಿ ಪ್ರತಿರೋಧಿಸಲು ಯತ್ನಿಸಿದಾಗ ಡ್ರ್ಯಾಗರ್‌ನಿಂದ ಮತ್ತೆ ಮೂರು ಬಾರಿ ದೇಹಕ್ಕೆ ಚುಚ್ಚಿ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ದೇವಿ ಅವರು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇತ್ತ ಕೃತ್ಯ ಎಸಗಿದ ಬಳಿಕ ಆರೋಪಿ ಗೌತಮ್ ದೇವಿಯ ಬ್ಯಾಗ್‌ನಲ್ಲಿದ್ದ ನಗದು ಮತ್ತು ಮೊಬೈಲ್ ಫೋನ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮೃತರ ಸ್ನೇಹಿತರ ಹೇಳಿಕೆ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿ ಗೌತಮ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ