ಇಡೀ ಕುಟುಂಬವನ್ನೇ ಬಲಿ ಪಡೆದ ಐಫೋನ್ ಇಎಂಐ ವಿವಾದ
ಐಫೋನ್ ಇಎಂಐ ಪಾವತಿಯ ಸಣ್ಣ ವಿವಾದಕ್ಕೆ ಮಗ ಹಾಗೂ ತಂದೆ, ತಾಯಿ ಮೂವರೂ ಬೆಟ್ಟದಿಂದ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆಯೊಂದು ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾಜಿಕ ಗೌರವ ಹಾಗೂ ದುಬಾರಿ ವಸ್ತುಗಳ ವ್ಯಾಮೋಹ ಇಂದಿನ ಯುವ ಪೀಳಿಗೆಯನ್ನು ಎತ್ತ ಸಾಗಿಸುತ್ತಿದೆ ಎಂಬುದಕ್ಕೆ ಮಹಾರಾಷ್ಟ್ರದಲ್ಲಿ ನಡೆದ ಈ ಭೀಕರ ಘಟನೆಯೇ ಸಾಕ್ಷಿ. ಇಲ್ಲಿನ ಛತ್ರಪತಿ ಸಂಭಾಜಿನಗರದಲ್ಲಿನ ಬೆಟ್ಟದಿಂದ ಬಿದ್ದು ತಂದೆ, ತಾಯಿ ಹಾಗೂ ಮಗ ಮೂವರೂ ದಾರುಣವಾಗಿ ಮೃತಪಟ್ಟ ಆಘಾತಕಾರಿ ಘಟನೆ ನಡೆದಿದೆ. ಈ ಇಡೀ ಕುಟುಂಬದ ದುರಂತ ಅಂತ್ಯಕ್ಕೆ ಪ್ರಮುಖ ಕಾರಣ ಒಂದು ದುಬಾರಿ 'ಐಫೋನ್' ಕಂತು ಪಾವತಿ ವಿಚಾರ ಎನ್ನುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, 18 ವರ್ಷದ ಯುವಕ ಕುನಾಲ್ ಇತ್ತೀಚೆಗಷ್ಟೇ ಇಷ್ಟ ಪಟ್ಟಂತೆ ದುಬಾರಿ ಐಫೋನ್ ಖರೀದಿಸಿದ್ದ. ಆದರೆ ಅದರ ಮಾಸಿಕ ಇಎಂಐ ಹಣವನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಆತನ ಬಳಿ ಹಣವಿರಲಿಲ್ಲ. ಆದ್ದರಿಂದ ಆತ ತನ್ನ ತಂದೆ ಮುರಳೀಧರ್ ಚಾಂದ್ಗುಡೆ ಅವರ ಬಳಿ ಹಣಕ್ಕಾಗಿ ವಾದಕ್ಕಿಳಿಯುತ್ತಿದ್ದ.
ಬಳಿಕ ಇದೇ ಕಂತು ಕಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗನ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಬೇಸರಗೊಂಡ ಕುನಾಲ್, ಮನೆಯಿಂದ ಹೊರಟು ವಾಲುಜ್ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ತಿಸ್ಗಾಂವ್ ಪ್ರದೇಶದ ಎತ್ತರದ ಬೆಟ್ಟದ ತುದಿಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದ.
ಮನವೊಲಿಸಲು ಭಾರಿ ಯತ್ನ
ಮಗ ಬೆಟ್ಟದ ತುದಿಯಲ್ಲಿ ನಿಂತು ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಕಂಡ ತಂದೆ ಮುರಳೀಧರ್ ಮತ್ತು ತಾಯಿ ಸಂಗೀತಾ ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರು, ಗ್ರಾಮದ ಮಾಜಿ ಸರಪಂಚ್ ಸಂಜಯ್ ಜಾಧವ್ ಹಾಗೂ ಪೊಲೀಸರು ಆತನನ್ನು ಕೆಳಗೆ ಇಳಿಯುವಂತೆ ತುಂಬಾ ಹೊತ್ತು ಬೇಡಿಕೊಂಡರು. ಆದರೂ ಕೂಡ ಆತ ಕೆಳಗಡೆ ಬರಲಿಲ್ಲ.
ಸಾಮಾಜಿಕ ಜಾಲಯಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಸ್ಥಳೀಯರು, 'ನಿನ್ನ ಮುಂದಿನ ಭವಿಷ್ಯದ ಬಗ್ಗೆ ಯೋಚಿಸು, ಹೆತ್ತವರಿಗಾಗಿಯಾದರೂ ಬದುಕು. ನಿನಗೆ ನಾವು ಹೊಸ 'ಐಫೋನ್ 15 Pro' ಕೊಡಿಸುತ್ತೇವೆ, ದಯವಿಟ್ಟು ಕೆಳಗೆ ಬಾ,' ಎಂದು ಬೇಡಿಕೊಳ್ಳುತ್ತಿರುವುದು ಕಂಡುಬಂದಿದೆ. ಆದರೆ ಖಿನ್ನತೆಗೆ ಒಳಗಾಗಿದ್ದ ಕುನಾಲ್ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಮಗನನ್ನು ರಕ್ಷಿಸಲು ಹೋಗಿ ತಂದೆ-ತಾಯಿಯೂ ಬಲಿ
ಇನ್ನೂ ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ತಂದೆ ಮುರಳೀಧರ್ ಸ್ವತಃ ಅಪಾಯಕಾರಿ ಬೆಟ್ಟದ ತುದಿಗೆ ತೆರಳಿ ಮಗನನ್ನು ಹಿಡಿದು ಎಳೆಯಲು ಯತ್ನಿಸಿದರು. ಆದರೆ ದುರದೃಷ್ಟವಶಾತ್ ಆ ರಭಸದಲ್ಲಿ ಇಬ್ಬರ ಕಾಲು ಜಾರಿ ಸಮತೋಲನ ತಪ್ಪಿ ಬೆಟ್ಟದ ಕೆಳಗಡೆ ಬಿದ್ದರು. ಕಣ್ಣೆದುರೇ ಗಂಡ ಮತ್ತು ಮಗ ನೂರಾರು ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪುವ ದೃಶ್ಯವನ್ನು ಕಂಡ ಸಂಗೀತಾ ಕೂಡ ಕೆಲವೇ ಕ್ಷಣಗಳಲ್ಲಿ ತಾನೂ ಬೆಟ್ಟದ ತುದಿಯಿಂದ ಕೆಳಗೆ ಹಾರಿದರು. ಪರಿಣಾಮ ಮೂವರೂ ಸ್ಥಳದಲ್ಲೇ ಪ್ರಾಣ ಬಿಟ್ಟರು ಎಂದು ತಿಳಿದುಬಂದಿದೆ.

Comments
Post a Comment