ದಾವಣಗೆರೆ ಶಾಸಕ ಸಮರ್ಥ ಶಾಮನೂರು ಅವರ ಕಾರು ಚಿತ್ರದುರ್ಗದ ಹಿರಿಯೂರು ಬಳಿ ಸರಣಿ ಅಪಘಾತಕ್ಕೀಡಾಗಿದ್ದು, ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಶಾಸಕ ಸಮರ್ಥ ಶಾಮನೂರು ಅವರು ಬೆಂಗಳೂರಿನಿಂದ ದಾವಣಗೆರೆಗೆ ಕಾರಿನಲ್ಲಿ ತೆರಳುತ್ತಿದ್ದರು. ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಗೇಟ್ ಸಮೀಪ ಬಂದಾಗ, ಅತಿ ವೇಗವಾಗಿ ಬಂದ ಕಾರೊಂದು ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಪಲ್ಟಿಯಾಗಿದೆ. ಶಾಸಕರು ಪ್ರಯಾಣಿಸುತ್ತಿದ್ದ ಕಾರು ಕೂಡ ಈ ವೇಳೆ ಹಿಂಬದಿಯಲ್ಲೇ ಬರುತ್ತಿತ್ತು. ಅಪಘಾತದ ಗಡಿಬಿಡಿಯಲ್ಲಿ ಶಾಸಕರ ಕಾರಿಗೆ ಮತ್ತೊಂದು ಎರ್ಟಿಗಾ ಕಾರು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಪಲ್ಟಿಯಾದ ಕಾರಿನಲ್ಲಿದ್ದ ಸಂದೀಪ್ (45) ಎಂಬುವವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಸಂದೀಪ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಶಾಸಕ ಸಮರ್ಥ ಶಾಮನೂರು ಅವರಿಗೆ ಯಾವುದೇ ಗಾಯಗಳಾಗಿಲ್ಲ. ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದ ನಂತರ ಮತ್ತೊಂದು ಕಾರಿನಲ್ಲಿ ದಾವಣಗೆರೆಗೆ ಪ್ರಯಾಣ ಮುಂದುವರಿಸಿದ್ದಾರೆ.
ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗದ ಚಾಲನೆ ಮತ್ತು ಅಜಾಗರೂಕತೆಯಿಂದ ಓವರ್ ಟೇಕ್ ಮಾಡಲು ಹೋದದ್ದು ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Comments
Post a Comment