ದಾವಣಗೆರೆ ಜಿಲ್ಲಾ ಮಟ್ಟದ ಲೋಕಾಯುಕ್ತ ಸಭೆ: ಅಧಿಕಾರಿಗಳ ಕಾರ್ಯವೈಖರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ತರಾಟೆ
ದಾವಣಗೆರೆ:
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದರು.
ಸೊಳೆಕೆರೆ ಸಂರಕ್ಷಣೆ ಮತ್ತು ಒತ್ತುವರಿ ತೆರವಿಗೆ ತಾಕೀತು
ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚನ್ನಗಿರಿ ತಾಲ್ಲೂಕಿನ ಸೊಳೆಕೆರೆಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅಧಿಕಾರಿಗಳು ಪ್ರದರ್ಶಿಸಬೇಕಿದೆ. ಸುತ್ತಲಿನ ಗ್ರಾಮ, ಹೋಟೆಲ್ ಹಾಗೂ ಕಟ್ಟಡಗಳ ಕೊಳಚೆನೀರು ಕೆರೆಯ ಒಡಲು ಸೇರುತ್ತಿರುವುದನ್ನು ತಡೆಯಬೇಕು. ೨೦೨೫ರಲ್ಲಿ ಈ ಕುರಿತು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದರೂ ನಿರೀಕ್ಷಿತ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೆರೆಯ ಸುತ್ತಲಿನ ೯ ಹಳ್ಳlಗಳ ಕೊಳಚೆನೀರು ಶುದ್ಧೀಕರಣಕ್ಕೆ ಶಾಶ್ವತ ಕ್ರಮವಾಗಿ ಎಸ್‌ಟಿಪಿ (STP) ಘಟಕ ಸ್ಥಾಪಿಸಲು ಡಿಪಿಆರ್ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹಾಗೂ ಜಿ.ಪಂ. ಸಿಇಒ ಗೀತಾ ಮಾಧವ ವತ್ಸಲ ರಾವ್ ತಿಳಿಸಿದರು.
ಭೂದಾಖಲೆಗಳ ಇಲಾಖೆ ಹಾಗೂ ಎಡಿಎಲ್‌ಆರ್ ಕಚೇರಿಗಳ ಅಕ್ರಮಕ್ಕೆ ಆಕ್ರೋಶ
ಚನ್ನಗಿರಿ, ಹೊನ್ನಾಳಿ, ಹರಿಹರ ಹಾಗೂ ಜಗಳೂರು ತಾಲ್ಲೂಕಿನ ಭೂದಾಖಲೆಗಳ ಇಲಾಖೆಯ ಸಹಾಯಕರ ನಿರ್ದೇಶಕರ ಕಾರ್ಯವೈಖರಿಯನ್ನು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು. ಚನ್ನಗಿರಿ ಎಡಿಎಲ್‌ಆರ್ ಕಚೇರಿಗೆ ಬರುವ ರೈತರನ್ನು ಸಮೀಪದ ಜೆರಾಕ್ಸ್ ಅಂಗಡಿಯಲ್ಲಿ ಚಲನ್ ಪಡೆಯಲು ಕಳುಹಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ, ತನಿಖೆ ನಡೆಸಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು. ಜಗಳೂರು ಎಡಿಎಲ್‌ಆರ್ ಸುಮಾ ನಾಯಕ್ ಕಚೇರಿಗೆ ಸರಿಯಾಗಿ ಹಾಜರಾಗುತ್ತಿಲ್ಲವೆಂಬ ದೂರುಗಳ ಬಗ್ಗೆಯೂ ಎಚ್ಚರಿಕೆ ನೀಡಿದರು.
ತಪ್ಪು ಮಾಹಿತಿ ನೀಡಿದ ಡಿಡಿಪಿಐಗೆ ತೀವ್ರ ತರಾಟೆ
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ೧ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆಂಚ್‌ಗಳಿವೆ ಎಂದು ತಪ್ಪು ಮಾಹಿತಿ ನೀಡಿದ ಡಿಡಿಪಿಐ ಕೃಷ್ಣಪ್ರಸಾದ್ ವಿರುದ್ಧ ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ಜಿ.ಪಂ. ಸಿಇಒ, ಜಿಲ್ಲೆಯಲ್ಲಿ ಶೇ. ೨೫ರಷ್ಟು ಸರ್ಕಾರಿ ಶಾಲೆಗಳಲ್ಲಿ ಬೆಂಚ್ ಸೇರಿದಂತೆ ಮೂಲಸೌಕರ್ಯಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಹರಿಹರ ಸಾರ್ವಜನಿಕ ಆಸ್ಪತ್ರೆ ಹಾಗೂ ನಗರಸಭೆ ವಿರುದ್ಧ ಕಿಡಿ
ಲಂಚಾವತಾರ: ಹರಿಹರ ಸಾರ್ವಜನಿಕ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಪ್ರತಿ ಬಾಣಂತಿಯಿಂದ ₹೩,೦೦೦ ಲಂಚ ಪಡೆಯುತ್ತಿರುವ ಸ್ತ್ರೀರೋಗ ತಜ್ಞೆಯನ್ನು ಕೂಡಲೇ ಪತ್ತೆ ಹಚ್ಚಿ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ತಾಕೀತು ಮಾಡಿದರು.
ನಗರಸಭೆ ನಿರ್ಲಕ್ಷ್ಯ: ಹರಿಹರ ನಗರಸಭೆಯಲ್ಲಿ ಸಂಗ್ರಹಿಸಿದ ಕಸವನ್ನು ವಿಲೇವಾರಿ ಘಟಕದಲ್ಲಿ ರಾಶಿಹಾಕಲಾಗುತ್ತಿದ್ದು, ೧೦ಕ್ಕೂ ಹೆಚ್ಚು ವಾಹನಗಳ ವಿಮಾ ಅವಧಿ ಮುಗಿದಿದೆ. ಪೌರಕಾರ್ಮಿಕರಿಗೆ ೩ ವರ್ಷಗಳಿಂದ ಬೆಳಗಿನ ಉಪಹಾರ ನೀಡಿಲ್ಲ ಹಾಗೂ ಬೀದಿನಾಯಿ ಹಾವಳಿ ತಡೆಯುವಲ್ಲಿ ವಿಫಲವಾಗಿರುವುದಕ್ಕೆ ಪೌರಯುಕ್ತಿಗೆ ನೋಟಿಸ್ ಜಾರಿಗೊಳಿಸಲು ಸೂಚಿಸಿದರು.
ಹಣ ದುರುಪಯೋಗ: ಎಫ್‌ಐಆರ್ ದಾಖಲಿಸಲು ಸೂಚನೆ
ಸರ್ಕಾರಿ ಅನುಧಾನ ಹಾಗೂ ಸಾರ್ವಜನಿಕರ ತೆರಿಗೆ ಹಣ ದುರುಪಯೋಗಪಡಿಸಿಕೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಮಿನಲ್ ಪ್ರಕರಣ (ಎಫ್‌ಐಆರ್) ದಾಖಲಿಸಬೇಕು. ಜಗಳೂರು ತಾಲ್ಲೂಕಿನ ದೇವಿಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ₹೧೬ ಲಕ್ಷ ಹಾಗೂ ಬಿಲ್ ಕಲೆಕ್ಟರ್ ವೀರೇಶ್ ₹೨.೫ ಲಕ್ಷ ಪಾವತಿಸದೆ ಇರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಲೋಕಾಯುಕ್ತ ಎಡಿಜಿಪಿ ಮನೀಶ್ ಕೇಕರ್, ಲೋಕಾಯುಕ್ತರ ಕಾರ್ಯದರ್ಶಿ ಶ್ರೀನಾಥ್ ಕೆ., ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ. ಸೇರಿದಂತೆ ಮುಂತಾದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments
Post a Comment