ಬ್ಯಾಂಕ್ ಗ್ರಾಹಕರಿಗೆ ದೊಡ್ಡ ರಿಲೀಫ್: ಕೊನೆ ಕ್ಷಣದಲ್ಲಿ 3 ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆ! UFBU ಅಧಿಕೃತ ಪ್ರಕಟಣೆ
ಸೆಪ್ಟೆಂಬರ್ 28ರಿಂದ ಸೆಪ್ಟೆಂಬರ್ 30 ರವರೆಗೆ ದೇಶಾದ್ಯಂತ ಆಯೋಜಿಸಲಾಗಿದ್ದ ಮೂರು ದಿನಗಳ ಬ್ಯಾಂಕ್ ನೌಕರರ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಮತ್ತು ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟವಾದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಡುವೆ ನಡೆದ ಉನ್ನತ ಮಟ್ಟದ ಮಾತುಕತೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸೆಪ್ಟೆಂಬರ್ 27 ರಂದು ರಾತ್ರಿ 9:30 ಕ್ಕೆ ಐಬಿಎ ಮತ್ತು ಯುಎಫ್‌ಬಿಯು ಪ್ರತಿನಿಧಿಗಳ ನಡುವೆ ಸುದೀರ್ಘ ಚರ್ಚೆಗಳು ನಡೆದವು. ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಜಂಟಿ ಸಮಿತಿಯನ್ನು ರಚಿಸಲು ಐಬಿಎ ಸಮ್ಮತಿಸಿದ ಹಿನ್ನೆಲೆಯಲ್ಲಿ, ಪ್ರತಿಭಟನಾ ಕಾರ್ಯಕ್ರಮಗಳು ಹಾಗೂ ಮುಷ್ಕರವನ್ನು ಮುಂದೂಡಲು ಯೂನಿಯನ್‌ಗಳು ನಿರ್ಧರಿಸಿವೆ.
ಮಾತುಕತೆಯ ನಂತರ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಬಿಡುಗಡೆ ಮಾಡಿದ ಅಧಿಕೃತ ಜಂಟಿ ಪ್ರಕಟಣೆಯ ಪೂರ್ಣ ವಿವರ ಇಲ್ಲಿದೆ:
ಸೆಪ್ಟೆಂಬರ್ 27 ರಂದು ರಾತ್ರಿ 9:30 ಕ್ಕೆ ಐಬಿಎ (IBA) ಮತ್ತು ಯುಎಫ್‌ಬಿಯು (UFBU) ನಡುವೆ ಸಭೆ ನಡೆಯಿತು. ವಿವರವಾದ ಆಲೋಚನೆ ಮತ್ತು ಚರ್ಚೆಗಳ ನಂತರ ಈ ಕೆಳಗಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ:
ಉಳಿದ ಶನಿವಾರಗಳಿಗೆ ರಜೆ ಘೋಷಣೆ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಎಲ್ಲಾ ಶನಿವಾರಗಳನ್ನು ರಜಾದಿನಗಳೆಂದು ಘೋಷಿಸುವ ವಿಷಯದ ಕುರಿತು ಚರ್ಚಿಸಲು ಐಬಿಎ ಮತ್ತು ಯುಎಫ್‌ಬಿಯು ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ತಕ್ಷಣವೇ ರಚಿಸಲಾಗುವುದು.
ಎಲ್ಲಾ ಪಾಲುದಾರರ ಹಿತರಕ್ಷಣೆ: ಈ ಸಮಿತಿಯು ಲಭ್ಯವಿರುವ ಎಲ್ಲಾ ಪರ್ಯಾಯ ಮಾರ್ಗಗಳನ್ನು ಪರಿಶೀಲಿಸಲಿದೆ. ಗ್ರಾಹಕರು, ಬ್ಯಾಂಕ್‌ಗಳು ಹಾಗೂ ನೌಕರರು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಚರ್ಚಿಸಿ, ಎಲ್ಲರಿಗೂ ಹಾಗೂ ಮುಖ್ಯವಾಗಿ ಬ್ಯಾಂಕ್ ಗ್ರಾಹಕರಿಗೆ ಅನುಕೂಲಕರವಾದ ಮತ್ತು ಸ್ವೀಕಾರಾರ್ಹವಾದ ಪರಿಹಾರವನ್ನು ಕಂಡುಕೊಳ್ಳಲಿದೆ.
ಪಿಎಲ್‌ಐ ಯೋಜನೆ : ಸ್ಕೇಲ್ IV ಮತ್ತು ಅದಕ್ಕಿಂತ ಮೇಲಿನ ದರ್ಜೆಯ ಅಧಿಕಾರಿಗಳಿಗೆ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ (PLI) ಯೋಜನೆಗೆ ಸಂಬಂಧಿಸಿದಂತೆ, ಯೂನಿಯನ್‌ಗಳು ಮತ್ತು ಅಸೋಸಿಯೇಷನ್‌ಗಳು ಎತ್ತಿರುವ ಆಕ್ಷೇಪಣೆಗಳನ್ನು ಸರಿಪಡಿಸಲು ಅಗತ್ಯ ತಿದ್ದುಪಡಿಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲು ಐಬಿಎ ಜೊತೆ ಚರ್ಚೆಗಳು ತಕ್ಷಣವೇ ಪ್ರಾರಂಭವಾಗಲಿವೆ.
ಬಾಕಿ ಉಳಿದಿರುವ ಬೇಡಿಕೆಗಳು: ಮಾರ್ಚ್ 8, 2024 ರ ಸಭೆಯ ನಡಾವಳಿಗಳಲ್ಲಿ ಪಟ್ಟಿ ಮಾಡಲಾದ ಇತರ ಬಾಕಿ ಇರುವ ಎಲ್ಲಾ ವಿಷಯಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಎರಡೂ ಕಡೆಯವರು ಚರ್ಚೆ ನಡೆಸಲಿದ್ದಾರೆ.
ಮೇಲ್ಕಂಡ ಸಕಾರಾತ್ಮಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಯುಎಫ್‌ಬಿಯು ತೀರ್ಮಾನಿಸಿದಂತೆ ಆಯೋಜಿಸಲಾಗಿದ್ದ ಎಲ್ಲಾ ರೀತಿಯ ಪ್ರತಿಭಟನಾ ಕಾರ್ಯಕ್ರಮಗಳು ಮತ್ತು ಮುಷ್ಕರದ ಕರೆಯನ್ನು ಮುಂದೂಡಲು ಸಮ್ಮತಿಸಲಾಗಿದೆ
ಯೂನಿಯನ್‌ಗಳ ಮುಖ್ಯ ಬೇಡಿಕೆಗಳೇನು?
ಬ್ಯಾಂಕ್ ನೌಕರರ ಒಕ್ಕೂಟಗಳು ಹಲವು ದಿನಗಳಿಂದ ಕೆಲವು ಪ್ರಮುಖ ಬೇಡಿಕೆಗಳಿಗಾಗಿ ಒತ್ತಾಯಿಸುತ್ತಿದ್ದವು:
ವಾರದಲ್ಲಿ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ: ತಿಂಗಳ ಎಲ್ಲಾ ಶನಿವಾರಗಳನ್ನು ರಜಾದಿನಗಳೆಂದು ಘೋಷಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ. ಪ್ರಸ್ತುತ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ರಜೆ ಇರುತ್ತದೆ.
ಪಿಂಚಣಿ ಸುಧಾರಣೆಗಳು ಮತ್ತು ಹಳೆಯ ಪಿಂಚಣಿ ಯೋಜನೆ (OPS): ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಅಡಿಯಲ್ಲಿರುವ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ (OPS) ಮರಳಲು ಅವಕಾಶ ಕಲ್ಪಿಸಬೇಕು.
ವೇತನ ಮತ್ತು ಪ್ರೋತ್ಸಾಹಕ ವ್ಯತ್ಯಾಸಗಳ ಸರಿಪಡೆ: ವೇತನ ಪರಿಷ್ಕರಣೆಗೆ ಸಂಬಂಧಿಸಿದ ಬಾಕಿ ವಿಷಯಗಳು ಮತ್ತು ಅಧಿಕಾರಿ ವರ್ಗದ ಪ್ರೋತ್ಸಾಹಕ (PLI) ಯೋಜನೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವುದು.
ಗ್ರಾಹಕರಿಗೆ ಸಿಕ್ಕ ದೊಡ್ಡ ರಿಲೀಫ್
ತಿಂಗಳ ಕೊನೆಯಲ್ಲಿ ಮತ್ತು ಸಾಲು ಸಾಲು ಸಾಲದಿನಗಳ ಸಂದರ್ಭದಲ್ಲಿ ಮೂರು ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿದ್ದರೆ, ದೇಶಾದ್ಯಂತ ಚೆಕ್ ಕ್ಲಿಯರಿಂಗ್, ನಗದು ಠೇವಣಿ, ಡ್ರಾಫ್ಟ್ ಸೇವೆಗಳು ಹಾಗೂ ಶಾಖೆಯ ಮಟ್ಟದ ವಹಿವಾಟುಗಳು ಸಂಪೂರ್ಣವಾಗಿ ಸ್ತಬ್ಧಗೊಳ್ಳುವ ಭೀತಿ ಇತ್ತು. ಆದರೆ ಈಗ ಮುಷ್ಕರ ಮುಂದೂಡಿಕೆಯಾಗಿರುವುದರಿಂದ ದೇಶಾದ್ಯಂತ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಸಾಮಾನ್ಯ ದಿನದಂದತೆ ಕಾರ್ಯನಿರ್ವಹಿಸಲಿವೆ.
ಸಂಬಳ, ಪಿಂಚಣಿ ಮತ್ತು ಸರ್ಕಾರದ ವಿವಿಧ ಭತ್ಯೆಗಳ ಜಮಾ ಕಾರ್ಯಗಳು ವಿಳಂಬವಿಲ್ಲದೆ ಸಾಗಲಿದ್ದು, ಸಾರ್ವಜನಿಕರಿಗೆ ಮತ್ತು ಉದ್ಯಮಿಗಳಿಗೆ ದೊಡ್ಡ ಸಮಾಧಾನ ತಂದಿದೆ.

Comments
Post a Comment