ಪಡಿತರ ಅಕ್ಕಿ ನೆಪದಲ್ಲಿ ಧಮಕಿ, ಸುಲಿಗೆ ಯತ್ನ; ಮೂವರು ಆರೋಪಿಗಳ ಬಂಧನ
ಉಡುಪಿ ಸೆಪ್ಟೆಂಬರ್ 03: ಮನೆಯ ಅಂಗಳದಲ್ಲಿ ಪಡಿತರ ಅಕ್ಕಿ ಚೀಲಗಳನ್ನು ಇಟ್ಟುಕೊಂಡಿದ್ದೀರಿ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಲಿಗೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುಲಿಗೆ ಹಾಗೂ ಬೆದರಿಕೆ ಒಡ್ಡಿದ ಆರೋಪಿಗಳಾದ ಕೋಟತಟ್ಟು ಗ್ರಾಮದ ನಾಗೇಂದ್ರ ಪುತ್ರನ್ (37) ಹಾಗೂ ಪಾರಂಪಳ್ಳಿ ಗ್ರಾಮದ ಪಡುಕೆರೆ ನಿವಾಸಿ ಪಿ. ಸುಮಂತ್ ಕುಂದರ್ (40) ಅವರನ್ನು ಸೆಪ್ಟೆಂಬರ್ 2ರಂದು ಮೈಸೂರಿನ ಅರಮನೆ ಎದುರಿನ ವಸ್ತು ಪ್ರದರ್ಶನ ಮೈದಾನದ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ, ಮೂಡುಹಡು ಗ್ರಾಮದ ಸಚಿನ್ ಶ್ರೀಯಾನ್ (32) ಎಂಬಾತನನ್ನು ಸೆಪ್ಟೆಂಬರ್ 1ರಂದೇ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.
ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ: ಆಗಸ್ಟ್ 31ರಂದು ಈ ಘಟನೆ ನಡೆದಿದ್ದು, ಸಂತ್ರಸ್ತರು ನೀಡಿದ ದೂರಿನನ್ವಯ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಬಂಧನಕ್ಕಾಗಿ ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಆರ್. ಹಾಗೂ ಪಿಎಸ್‌ಐ ಮಹಾಂತೇಶ ಜಾಬಗೌಡ ನೇತೃತ್ವದಲ್ಲಿ ಸಿಬ್ಬಂದಿಗಳಾದ ವಿಜಯೇಂದ್ರ, ಶರತ್ ಮತ್ತು ಶಿವರಾಜ್ ಅವರಿದ್ದ ಪ್ರತ್ಯೇಕ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

Comments
Post a Comment