ಪೂಜೆ ಹಾಗೂ ಹಣದ ಹೊಳೆ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ,ಅಕ್ಕ ಪಡೆಯಿಂದ 11 ಆರೋಪಿಗಳು ಅರೆಸ್ಟ್

 

ಲಕ್ಷ್ಮೀ ಪೂಜೆ ಮಾಡುವುದಾಗಿ ಹೇಳಿ, ಹಣದ ಹೊಳೆಯ ಹೆಸರಿನಲ್ಲಿ ಮುಗ್ಧ ಯುವತಿಯರನ್ನು ವಂಚಿಸಿ, ಲೈಂಗಿಕ ದೌರ್ಜನ್ಯ ಹಾಗೂ ಹೈಟೆಕ್ ವೇಶ್ಯಾವಾಟಿಕೆ ದಂಧೆಗೆಬಳಸಿಕೊಳ್ಳುತ್ತಿದ್ದ ಬೃಹತ್ ಅಂತರಾಜ್ಯ ಜಾಲವನ್ನು ಅಕ್ಕ ಪಡೆ ಪೊಲೀಸರು ಭೇದಿಸಿದ್ದಾರೆ.

‘ಅಕ್ಕ ಪಡೆ’ಯ ಮಹಿಳಾ ಪೊಲೀಸ್ ಸಿಬ್ಬಂದಿಯ ಎರಡು ತಿಂಗಳ ರಹಸ್ಯ ಕಾರ್ಯಾಚರಣೆಯ ಫಲವಾಗಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ.

ಬಳ್ಳಾರಿಯಲ್ಲಿ ಈ ಘಟನೆ ನಡೆದಿದೆ. ಆರ್ಥಿಕ ಸಂಕಷ್ಟದಲ್ಲಿರುವ ಮತ್ತು ಮೂಢನಂಬಿಕೆಗಳನ್ನು ನಂಬುವ ಅವಿವಾಹಿತ ಯುವತಿಯರನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು.



ಸುಂದರವಾಗಿರುವ, ಕನಿಷ್ಠ 5 ಅಡಿ 6 ಇಂಚು ಎತ್ತರವಿರುವ ಕನ್ಯೆಯರು ವಿಶೇಷ ಲಕ್ಷ್ಮೀ ಪೂಜೆ ಮಾಡಿದರೆ ಹಣದ ಮಳೆ ಸುರಿಯುತ್ತದೆ” ಎಂದು ನಂಬಿಸಿ ಯುವತಿಯರ ಮನವೊಲಿಸಲಾಗುತ್ತಿತ್ತು. ಆರಂಭದಲ್ಲಿ ಯುವತಿಯರ ಬಲಗೈ ಮತ್ತು ಬಲಗಾಲಿನ ಪ್ರತ್ಯೇಕ ಫೋಟೋಗಳನ್ನು ಪಡೆಯುತ್ತಿದ್ದ ಆರೋಪಿಗಳು, ಪೂಜೆಯಿಂದ ಬರುವ ಹಣದಲ್ಲಿ ಯುವತಿಗೆ, ಪೂಜೆ ಮಾಡುವ ಸ್ವಾಮೀಜಿಗೆ ಹಾಗೂ ಏಜೆಂಟ್‌ಗೆ ತಲಾ ಒಂದೊಂದು ಪಾಲು ಸಿಗುತ್ತದೆ ಎಂದು ಆಮಿಷವೊಡ್ಡುತ್ತಿದ್ದರು. ಆದರೆ, ಪೂಜೆಯ ನೆಪದಲ್ಲಿ ಯುವತಿಯರನ್ನು ಕರೆಸಿಕೊಂಡು ಅವರ ಬೆತ್ತಲೆ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ವೇಶ್ಯಾವಾಟಿಕೆ ಮತ್ತು ಮಹಿಳಾ ಮಾರಾಟ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು.

ಈ ದಂಧೆಯ ಕುರಿತು ಮಹಿಳೆಯೊಬ್ಬರು ನೀಡಿದ ಖಚಿತ ಮಾಹಿತಿ ಆಧಾರದ ಮೇರೆಗೆ ಬಳ್ಳಾರಿ ಪೊಲೀಸರು ವಿಶೇಷ ತಂಡ ರಚಿಸಿದ್ದರು. ‘ಅಕ್ಕ ಪಡೆ’ಯ ಮಹಿಳಾ ಪೊಲೀಸರೇ ಬಡ ಮಹಿಳೆಯರ ಸೋಗಿನಲ್ಲಿ ಈ ಗ್ಯಾಂಗ್‌ನ ಸಂಪರ್ಕ ಬೆಳೆಸಿದ್ದರು.

ಸತತ ಎರಡು ತಿಂಗಳ ಕಾಲ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಗ್ಯಾಂಗ್ ನ ಸಂಪೂರ್ಣ ಮಾಹಿತಿ ಕಲೆಹಾಕಿ ದಾಳಿ ನಡೆಸುವ ಮೂಲಕ 11 ಆರೋಪಿಗಳನ್ನು ಬಂಧಿಸಿದ್ದಾರೆ.

ಬಳ್ಳಾರಿ, ಚಿಕ್ಕಮಗಳೂರು, ಮೈಸೂರು ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲಿ ಈ ಗ್ಯಾಂಗ್ ಸಕ್ರಿಯವಾಗಿತ್ತು. ಈ ಜಾಲವು ಪೊಲೀಸರ ಕಣ್ಣುತಪ್ಪಿಸಲು ‘ಮೀಡಿಯಾ’, ‘ಪೇಪರ್’ ಸೇರಿದಂತೆ ಹಲವು ಕೋಡ್ ವರ್ಡ್‌ಗಳನ್ನು ಬಳಸಿ ವ್ಯವಹಾರ ನಡೆಸುತ್ತಿತ್ತು. ಈ ಇಡೀ ದಂಧೆಯ ಸೂತ್ರಧಾರ ಎನ್ನಲಾದ ಸ್ವಾಮೀಜಿಯೊಬ್ಬ ಡಿಆರ್‌ಎ (DRA) ಎಂಬ ಕೋಡ್ ವರ್ಡ್ ಮೂಲಕ ವ್ಯವಹರಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸ್ವಾಮೀಜಿಯ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

Comments

Popular posts from this blog

ದಾವಣಗೆರೆಯಲ್ಲಿ ವಿಜೃಂಭಣೆಯಿಂದ ನಡೆದ ಅಂತರರಾಷ್ಟ್ರೀಯ ಸಂಕೇತ ಭಾಷಾ ದಿನ ಹಾಗೂ ಕಿವುಡರ ಸಪ್ತಾಹ ಕಾರ್ಯಕ್ರಮ

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ