ಕೈಯಲ್ಲಿದಿದ್ದು 200 ರೂ. ಮಾತ್ರ… ಮಗಳ ಹುಟ್ಟುಹಬ್ಬಕ್ಕೆ ಸಿಹಿ ಖರೀದಿಸಲು ಹೋದ ತಂದೆಗೆ ದಂಡ; ಕಣ್ಣೀರಿನ ಕಥೆ ಕೇಳಿ ಮಾನವೀಯತೆ ಮೆರೆದ ಪೊಲೀಸರು!
ಕೊಟ್ಟಾಯಂ : ಕೇವಲ 200 ರೂಪಾಯಿ ಹಿಡಿದು ಮಗಳ ಹುಟ್ಟುಹಬ್ಬಕ್ಕೆ ಹೊರಟಿದ್ದ ಬಡ ತಂದೆ… ದಂಡದ ರಸೀದಿ ಕಂಡು ಕಣ್ಣೀರಿಟ್ಟ ಅಪ್ಪನ ನೋವಿಗೆ ಕರಗಿದ ಅಧಿಕಾರಿಗಳು. ತಮ್ಮ ಜೇಬಿನಿಂದ ದಂಡ ಪಾವತಿಸಿ, ಕೇಕ್, ಸಿಹಿತಿಂಡಿ ಹಾಗೂ ಹೊಸ ಬಟ್ಟೆ ಕೊಡಿಸಿ ತಂದೆಯ ಕಣ್ಣೀರೊರೆಸಿದ ಹೃದಯಸ್ಪರ್ಶಿ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.
ಕೇರಳದ ಕೊಟ್ಟಾಯಂನಲ್ಲಿ ನಡೆದ ಈ ಘಟನೆ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಎರುಮೇಲಿ ಮೂಲದ ಸುಜಿತ್ ಎಂಬ ಬಡ ತಂದೆ, ತನ್ನ ಮಗಳ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಬೇಕೆಂಬ ಆಸೆಯಿಂದ ಕೈಯಲ್ಲಿದ್ದ ಕೇವಲ 200 ರೂಪಾಯಿಯೊಂದಿಗೆ ಸಿಹಿತಿಂಡಿ ಖರೀದಿಸಲು ಮನೆಯಿಂದ ಹೊರಟಿದ್ದರು.
ಆದರೆ, ಎರುಮೇಲಿ ಮತ್ತು ಕಾಂಜಿರಪ್ಪಳ್ಳಿ ನಡುವೆ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ನಿಯಮಿತ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸುಜಿತ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದಲ್ಲಿ ಸೈಡ್ ಮಿರರ್ ಇಲ್ಲದಿರುವುದು ಹಾಗೂ ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವುದನ್ನು ಗಮನಿಸಿದ ಅಧಿಕಾರಿಗಳು ವಾಹನವನ್ನು ತಡೆದು 250 ರೂಪಾಯಿ ದಂಡ ವಿಧಿಸಿದರು.
ದಂಡದ ರಸೀದಿ ಕೈಗೆ ಸಿಗುತ್ತಿದ್ದಂತೆ ಸುಜಿತ್ ಕಣ್ಣೀರಿಡಲು ಆರಂಭಿಸಿದ್ದು, ಇದನ್ನು ಗಮನಿಸಿದ ಎಸ್ಐ ಸಿಜೊ ರವೀಂದ್ರನ್ ಹಾಗೂ ಅವರ ತಂಡ, ಅವರ ನೋವಿಗೆ ಕಾರಣವೇನೆಂದು ವಿಚಾರಿಸಿದರು. ಆಗ ಬಡ ತಂದೆಯ ಅಸಹಾಯಕತೆಯ ಕಥೆ ಹೊರಬಂದಿದೆ.
ಕಳೆದ ಮೂರು ವಾರಗಳಿಂದ ನನಗೆ ಯಾವುದೇ ಕೆಲಸವಿಲ್ಲ. ನನ್ನ ಕೈಯಲ್ಲಿ ಇರುವುದು ಕೇವಲ 200 ರೂಪಾಯಿ ಮಾತ್ರ. ಇಂದು ನನ್ನ ನಾಲ್ಕು ವರ್ಷದ ಮಗಳ ಹುಟ್ಟುಹಬ್ಬ. ಆ ಹಣದಲ್ಲಿ ಮಗಳಿಗೆ ಸಿಹಿತಿಂಡಿ ಖರೀದಿಸಬೇಕೆಂದು ಹೊರಟಿದ್ದೆ ಎಂದು ಸುಜಿತ್ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.
ಮಗಳ ಹುಟ್ಟುಹಬ್ಬದಂದು ಆಕೆಗೆ ಏನಾದರೂ ಕೊಡಿಸಬೇಕೆಂಬ ತಂದೆಯ ಆಸೆ… ಕೈಯಲ್ಲಿದ್ದ ಸಲ್ಪ ಹಣ, ಅದರ ಮಧ್ಯೆ ಎದುರಾದ ದಂಡದ ಸಂಕಷ್ಟ… ಇವೆಲ್ಲವನ್ನೂ ಕೇಳಿದ ಅಧಿಕಾರಿಗಳು ತಕ್ಷಣವೇ 250 ರೂಪಾಯಿ ದಂಡವನ್ನು ತಮ್ಮ ಸ್ವಂತ ಜೇಬಿನಿಂದ ಪಾವತಿಸಿದರು.
ಅಷ್ಟಕ್ಕೇ ನಿಲ್ಲದ ಅಧಿಕಾರಿಗಳು, ಸುಜಿತ್ ಅವರನ್ನು ಎರುಮೇಲಿ ಪಟ್ಟಣದ ಬೇಕರಿಗೆ ಕರೆದೊಯ್ದರು. ಅಲ್ಲಿ ಅವರ ಮಗಳು ವೈಗಾಳಿಗಾಗಿ ಕೇಕ್, ಸಿಹಿತಿಂಡಿಗಳು ಹಾಗೂ ಹೊಸ ಬಟ್ಟೆಗಳನ್ನು ತಮ್ಮ ಸ್ವಂತ ಹಣದಿಂದಲೇ ಖರೀದಿಸಿಕೊಟ್ಟರು.
ನಂತರ ಸುಜಿತ್ ಅವರ ಮನೆಗೆ ತೆರಳಿದ ಅಧಿಕಾರಿಗಳು, ಕುಟುಂಬದವರ ಸಮ್ಮುಖದಲ್ಲಿ ಪುಟ್ಟ ಬಾಲಕಿ ವೈಗಾಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ, ಕೇಕ್ ಕತ್ತರಿಸುವ ಮೂಲಕ ಸುಜಿತ್ ಕುಟುಂಬದ ಸಂತೋಷದಲ್ಲಿ ಭಾಗಿಯಾದರು.
ತಂದೆಯ ಕೈಯಲ್ಲಿ ಹಣ ಕಡಿಮೆಯಿದ್ದರೂ ಮಗಳ ಮೇಲಿನ ಪ್ರೀತಿ ಅಪಾರವಾಗಿತ್ತು. ಮಗಳ ಹುಟ್ಟುಹಬ್ಬಕ್ಕೆ ಸಂಭ್ರಮ ನೀಡಬೇಕೆಂಬ ಬಡ ತಂದೆಯ ಆಸೆಗೆ ಕೈಜೋಡಿಸಿದ ಈ ಅಧಿಕಾರಿಗಳ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Comments
Post a Comment